ಪ್ರವಾಹ ಮಧ್ಯೆ ಸೇತುವೆ ದಾಟಲು ಹೋಗಿ ಸಿಕ್ಕಿಬಿದ್ದ ತಹಸೀಲ್ದಾರ್ ; ಮರ ಏರಿ ರಕ್ಷಣೆಗಾಗಿ ಮೊರೆ ! 

16-09-20 11:02 pm       Headline Karnataka News Network   ಕರ್ನಾಟಕ

ಮಳೆ ಹಾನಿ ಪರಿಶೀಲನೆಗೆ ತೆರಳಿದ್ದ ತಹಶೀಲ್ದಾರ್ ಒಬ್ಬರು ಅಪಾಯದಲ್ಲಿ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ.

ಕಲಬುರಗಿ, ಸೆಪ್ಟಂಬರ್ 16: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ನದಿ ನಾಲೆಗಳು ತುಂಬಿ ಹರಿಯುತ್ತಿವೆ. ಈ ನಡುವೆ ಮಳೆ ಹಾನಿ ಪರಿಶೀಲನೆಗೆ ತೆರಳಿದ್ದ ತಹಶೀಲ್ದಾರ್ ಒಬ್ಬರು ಅಪಾಯದಲ್ಲಿ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಸೇತುವೆ ಮೇಲೆ ಹರಿಯುತ್ತಿದ್ದ ನದಿ ನೀರಿನಲ್ಲಿ ಕಾರು ಚಲಾಯಿಸಲೆತ್ನಿಸಿದ ತಹಶೀಲ್ದಾರ್ ಪಂಡಿತ್ ಬಿರಾದಾರ್ ಕಾರು ಕೊಚ್ಚಿ ಹೋಗಿದ್ದು ಆಪತ್ತಿಗೆ ಸಿಲುಕಿದ ತಹಸೀಲ್ದಾರ್ ಮರ ಹತ್ತಿ ಕುಳಿತಿದ್ದಾರೆ. 

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಗಣಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಸೇತುವೆ ದಾಟುತ್ತಿದ್ದ ವೇಳೆ ನೀರು ಹೆಚ್ಚಿದ್ದು ಅಪಾಯ ಎದುರಾಗಿತ್ತು. ಕಾರು ನೀರಿನಲ್ಲಿ ಮುಂದೆ ಚಲಿಸಲ್ಲ ಎಂದು ತಿಳಿದ ತಹಸೀಲ್ದಾರ್ ಮತ್ತು ಚಾಲಕ ಕಾರಿನಿಂದ ಇಳಿದು ನಡೆದುಕೊಂಡು ಹೋಗಿದ್ದಾರೆ. ಆದರೆ ಪ್ರವಾಹದ ನೀರಿನಲ್ಲಿ ಹೋಗಲು ಸಾಧ್ಯವಾಗದೆ ರಕ್ಷಣೆಗಾಗಿ ಅಲ್ಲಿಯೇ ಇದ್ದ ಮರ ಹತ್ತಿದ್ದಾರೆ. ಅಲ್ಲದೆ,  ಮರದಿಂದಲೇ ರಕ್ಷಣೆಗಾಗಿ  ಗೋಗರೆದಿದ್ದಾರೆ. ಪೋನ್ ಮುಖಾಂತರ ಇತರ ಅಧಿಕಾರಿಗಳನ್ನು ಸಂಪರ್ಕಿಸಿದ  ಅವರು ‘ನಾನು ಪ್ರವಾಹದಲ್ಲಿ ಸಿಲುಕಿದ್ದೇನೆ. ಮರದ ಮೇಲಿದ್ದೇನೆ’ ಎಂದು ಹೇಳಿದ್ದಾರೆ.

ಅಪಾಯದಲ್ಲಿ ಸಿಲುಕಿರುವ ಅಧಿಕಾರಿಯ ರಕ್ಷಣೆಗೆ ಕೂಡಲೇ ಪೊಲೀಸರ ತಂಡ ಧಾವಿಸಿದೆ. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಹಾಗೂ ಡಿವೈಎಸ್ಪಿ ವೀರಭದ್ರಯ್ಯ ಮತ್ತು ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ, ಮಿರಿಯಾಣ ಠಾಣೆಯ ಸಬ್ ಇನಸ್ಪೆಕ್ಟರ್ ಸಂತೋಷ ರಾಠೋಡ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣೆಗೆ ಧಾವಿಸಿದ್ದಾರೆ. ಕೊನೆಗೆ ಪ್ರವಾಹದ ನೀರಿನ ಮಧ್ಯೆ ಕಾರ್ಯಾಚರಣೆ ಯಶಸ್ವಿಯಾಗಿದ್ದು ಸಿಕ್ಕಿಬಿದ್ದ ತಹಸೀಲ್ದಾರ್ ಅವರನ್ನು ರಕ್ಷಣಾ ಸುರಕ್ಷಿತವಾಗಿ ಪಾರು ಮಾಡಿದೆ. ಮೂರು ಗಂಟೆಗಳ ಕಾರ್ಯಾಚರಣೆಯಲ್ಲಿ ಅಧಿಕಾರಿಯನ್ನು ರಕ್ಷಿಸಿ ಕರೆತಂದಿದ್ದು , ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Join our WhatsApp group for latest news updates