ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಇನ್ನಿಲ್ಲ ! ತಡರಾತ್ರಿ ಸಾವು ದೃಢಪಡಿಸಿದ ವೈದ್ಯರು 

17-09-20 04:37 pm       Bangalore Correspondent   ಕರ್ನಾಟಕ

ಇತ್ತೀಚಿಗಷ್ಟೇ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದ ಅಶೋಕ್‌ ಗಸ್ತಿ (55) ಕೊರೊನಾ ಗೆ ಬಲಿಯಾಗಿದ್ದಾರೆ.

ಬೆಂಗಳೂರು, ಸಪ್ಟೆಂಬರ್ 17: ಕೊರೊನಾ ಬಾಧಿತರಾಗಿ ತೀವ್ರ ನಿಗಾ ಘಟಕದಲ್ಲಿದ್ದ ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ(55) ತಡರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶೋಕ್ ಗಸ್ತಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಉಳಿಸಲಾಗಿತ್ತು. ನಿನ್ನೆ ಸಂಜೆ ಹೊತ್ತಿಗೆ ಗಸ್ತಿಯವರು ಸಾವನ್ನಪ್ಪಿದ್ದಾಗಿ ಸುದ್ದಿಗಳು ಹರಿದಾಡಿದ್ದವು. ಬಳಿಕ ರಾಜ್ಯ ಬಿಜೆಪಿ ಮತ್ತು ಆಸ್ಪತ್ರೆಯ ವೈದ್ಯರು ಅಶೋಕ್ ಗಸ್ತಿಯವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ. ದೇಹ ಸ್ಥಿತಿ ಗಂಭೀರವಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಸಾವನ್ನಪ್ಪಿದ ಸುದ್ದಿ ಬರಿಯ ವದಂತಿ ಅಷ್ಟೇ ಎಂದು ಸ್ಪಷ್ಟನೆಯಲ್ಲಿ ತಿಳಿಸಲಾಗಿತ್ತು. ಆದರೆ, ರಾತ್ರಿ 11 ಗಂಟೆ ವೇಳೆಗೆ ಆಸ್ಪತ್ರೆಯ ವೈದ್ಯರು ಹೇಳಿಕೆ ಬಿಡುಗಡೆ ಮಾಡಿದ್ದು ಅಶೋಕ್ ಗಸ್ತಿಯವರನ್ನು ಉಳಿಸಲು ಬಹಳಷ್ಟು ಪ್ರಯತ್ನ ಮಾಡಲಾಯಿತು. ಕೊರೊನಾ ಜೊತೆ ನ್ಯುಮೋನಿಯಾ ಬಾಧಿಸಿದ್ದರಿಂದ ಬಹು ಅಂಗಾಂಗ ವೈಫಲ್ಯಕ್ಕೀಡಾಗಿದ್ದರು. ರಾತ್ರಿ 10.30 ರ ವೇಳೆಗೆ ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ. 

ರಾಯಚೂರು ಜಿಲ್ಲೆಯ ಮೂಲದ ಅಶೋಕ್ ಗಸ್ತಿ ಬಿಜೆಪಿಯ ಶಿಸ್ತಿನ ಕಾರ್ಯಕರ್ತರಾಗಿದ್ದರು. ಅತ್ಯಂತ ಹಿಂದುಳಿದ ಸವಿತಾ ಸಮಾಜದವರಾಗಿದ್ದ ಗಸ್ತಿಯವರ ಪಕ್ಷ ನಿಷ್ಠೆ ಮತ್ತು ಸುದೀರ್ಘ ಸೇವೆಯನ್ನು ಪರಿಗಣಿಸಿ, ಅವರನ್ನು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಉದ್ಯಮಿಗಳು, ಹಣ ಇದ್ದವರು ಮಾತ್ರ ರಾಜ್ಯಸಭೆಗೆ ಹೋಗುತ್ತಿದ್ದ ಕಾಲದಲ್ಲಿ ಅಶೋಕ್ ಗಸ್ತಿಯವರಂತಹ ಬಡ ಕಾರ್ಯಕರ್ತನನ್ನು ಬಿಜೆಪಿ ಪರಿಗಣಿಸಿದ್ದು ಚರ್ಚೆಗೆ ಕಾರಣವಾಗಿತ್ತು. 

ಅಶೋಕ ಗಸ್ತಿ ಅವರಿಗೆ ಸೆಪ್ಟೆಂಬರ್ 2ರಂದು ಕೊರೊನಾ ದೃಢಪಟ್ಟಿತ್ತು. ಆರಂಭದಲ್ಲಿ ರೋಗ ಲಕ್ಷಣ ಇಲ್ಲದಿದ್ದರೂ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅಶೋಕ್ ಗಸ್ತಿ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರಿಗೂ ಕೊರೋನಾ ಪಾಸಿಟಿವ್ ಆಗಿತ್ತು.

Join our WhatsApp group for latest news updates