ಈ ತಿಂಗಳ ಅಂತ್ಯದ ವರೆಗೂ ವಿದ್ಯಾರ್ಥಿಗಳು ಶಾಲೆಗೆ ಹೋಗುವಂತಿಲ್ಲ ; ಇಲಾಖೆ ಸ್ಪಷ್ಟನೆ 

19-09-20 10:49 pm       Headline Karnataka News Network   ಕರ್ನಾಟಕ

ರಾಜ್ಯದಲ್ಲಿ ಈ ತಿಂಗಳ ಅಂತ್ಯದ ವರೆಗೆ ಶಾಲೆಗೆ ಅನುಮತಿ ನೀಡದಿರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಬೆಂಗಳೂರು, ಸೆಪ್ಟಂಬರ್ 19: ದೇಶದ ಬಹುತೇಕ ರಾಜ್ಯಗಳಲ್ಲಿ ಇದೇ ಸೆ.21ರಿಂದ 9ನೇ ತರಗತಿಯಿಂದ 12 ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆಗಳು ತೆರೆಯಲಿವೆ. ಆದರೆ, ಕರ್ನಾಟಕದಲ್ಲಿ ಮಾತ್ರ ಶಾಲೆಯಲ್ಲಿ ತರಗತಿ ಆರಂಭಿಸಲು ಅವಕಾಶ ನೀಡಲಾಗಿಲ್ಲ. 

ಕೇಂದ್ರ ಸರಕಾರ, ಒಂಬತ್ತನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಇದೇ 21ರಿಂದ ಶಾಲೆಗಳನ್ನು ತೆರೆಯಲು ಅವಕಾಶ ನೀಡಿದ್ದರೂ, ರಾಜ್ಯದಲ್ಲಿ ಈ ತಿಂಗಳ ಅಂತ್ಯದ ವರೆಗೆ ಶಾಲೆಗೆ ಅನುಮತಿ ನೀಡದಿರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ರಾಜ್ಯದಲ್ಲಿ ಕೋವಿಡ್‌ ಹರಡುತ್ತಿರುವ ಕಾರಣ, ವಿದ್ಯಾರ್ಥಿಗಳು ಶಾಲೆಗಳಿಗೆ ಬರುವುದು ಉಚಿತವಲ್ಲ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಪರಾಮರ್ಶಿಸಿ ತೀರ್ಮಾನಕ್ಕೆ ಬರಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿನ್ನೆಯಷ್ಟೇ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು ಶಾಲೆಯಷ್ಟೇ ತೆರೆಯಬಹುದು, ತರಗತಿಯನ್ನಲ್ಲ ಎಂದು ಹೇಳಿದ್ದರು.‌

ಕೇಂದ್ರ ಸರ್ಕಾರ ಆ. 29ರಂದು ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಶಾಲಾರಂಭಕ್ಕೆ ಅವಕಾಶ ನೀಡಿತ್ತು. ರಾಜ್ಯಗಳು ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ 9ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಸೆ. 21ರಿಂದ ಶಾಲೆಗಳನ್ನು ತೆರೆದು ಸಂದೇಹ ‍ಪರಿಹರಿಸಬಹುದು ಎಂದು ಹೇಳಿತ್ತು.

Join our WhatsApp group for latest news updates