ಇಂದಿನಿಂದ ಅಧಿವೇಶನ ; ಶಾಸಕರಿಗೆ ಕೊರೊನಾ ಭಯ, 70ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ?

21-09-20 10:37 am       Bangalore Correspondent   ಕರ್ನಾಟಕ

ಕೋವಿಡ್ ಸೋಂಕಿನ ಆತಂಕ, ಭಯದ ನಡುವೆ ಇಂದಿನಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು ಬಹುತೇಕ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳುವುದರಿಂದ ದೂರ ಉಳಿಯಲಿದ್ದಾರೆ. 

ಬೆಂಗಳೂರು, ಸೆಪ್ಟಂಬರ್ 21: ಕೋವಿಡ್ ಸೋಂಕಿನ ಆತಂಕ, ಭಯದ ನಡುವೆ ಇಂದಿನಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು ಬಹುತೇಕ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳುವುದರಿಂದ ದೂರ ಉಳಿಯಲಿದ್ದಾರೆ. 

ಒಂದೆಡೆ ಕೊರೊನಾ ಸೋಂಕಿನಿಂದಾಗಿ 70 ರಷ್ಟು ಶಾಸಕರು ಅಧಿವೇಶನಕ್ಕೆ ಬರಲಾಗದೆ ಕ್ವಾರಂಟೈನ್ ಆಗಿದ್ದಾರೆ. ಅಧಿವೇಶನಕ್ಕೆ ಬರುವ ಶಾಸಕರು, ಅಧಿಕಾರಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕಿದೆ. ಇದೇ ವೇಳೆ ಉತ್ತರ ಕರ್ನಾಟಕ ಮಳೆಯ ರೌದ್ರಾವತಾರ ಹಿನ್ನೆಲೆಯಲ್ಲಿ ಆ ಭಾಗದ ಶಾಸಕರು ಬೆಂಗಳೂರು ಬರುವುದನ್ನು ಮುಂದೂಡಿದ್ದಾರೆ. ಈ ಕಾರಣದಿಂದ ಇಂದಿನ ಅಧಿವೇಶನಕ್ಕೆ ಬಹುತೇಕ ಶಾಸಕರ ಹಾಜರಾತಿ ಕಡಿಮೆಯಾಗಲಿದೆ. ಇನ್ನು ಒಂಬತ್ತು ದಿನಗಳ ಅಧಿವೇಶನ ಎಂದು ಹೇಳುತ್ತಿದ್ದರೂ ಕೊರೊನಾದಿಂದಾಗಿ ಎಷ್ಟು ದಿನ ಸದನ ನಡೆಯಲಿದೆ ಎನ್ನುವುದರ ಖಾತ್ರಿಯಿಲ್ಲ. ಈ ಬಗ್ಗೆ ಸೋಮವಾರ ಸದನ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

ಡಿಸಿಎಂ ಡಾ| ಅಶ್ವತ್ಥನಾರಾಯಣ ಮತ್ತು ಸಚಿವರಾದ ಬಸವರಾಜ ಬೊಮ್ಮಾಯಿ, ಬೈರತಿ ಬಸವರಾಜ್‌, ಕೆ. ಗೋಪಾಲಯ್ಯ, ಸಚಿವ ಪ್ರಭು ಚವ್ಹಾಣ್‌ ಕೋವಿಡ್ 19 ಸೋಂಕಿನಿಂದ ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ. ಸುಮಾರು 70 ಶಾಸಕರು ಕೋವಿಡ್ 19 ಸೋಂಕಿನ ಕಾರಣಕ್ಕೆ ಕ್ವಾರಂಟೈನ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. 

ವಿಧಾನಸಭೆಯ ಹಾಲ್‌ನಲ್ಲಿ 300 ಆಸನಗಳಿದ್ದು, 269 ಆಸನಗಳಿಗೆ ಮೈಕ್‌ ವ್ಯವಸ್ಥೆ ಮಾಡಲಾಗಿದೆ. ದಿನವೂ ಸ್ಯಾನಿಟೈಸೇಶನ್‌, ಶಾಸಕರು - ಸಚಿವರಿಗೆ ಉಷ್ಣಾಂಶ ಪರೀಕ್ಷೆ, ಆಸನಗಳ ಮಧ್ಯೆ ಶೀಲ್ಡ್‌ , ನಡುವೆ ಅಂತರ ಕಲ್ಪಿಸಲಾಗಿದೆ. ಅಲ್ಲದೆ, 20 ಅಧಿಕಾರಿಗಳಿಗೆ ಮಾತ್ರ ಸದನಕ್ಕೆ ಹಾಜರಾಗಲು ಅವಕಾಶ ನೀಡಿದ್ದು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಸುಗಮ ಅಧಿವೇಶನಕ್ಕಾಗಿ ಕೈಗೊಳ್ಳಲಾಗಿದೆ.

Join our WhatsApp group for latest news updates