ವಿಧಾನಸಭೆ ಮೊಗಸಾಲೆಯಲ್ಲೇ ಹೊಡೆದಾಡಿಕೊಂಡ ಸಚಿವ- ಶಾಸಕ !  

21-09-20 07:21 pm       Bangalore Correspondent   ಕರ್ನಾಟಕ

ತೋಟಗಾರಿಕೆ ಸಚಿವ ನಾರಾಯಣ ಗೌಡ ಮತ್ತು ಚಿಕ್ಕಮಗಳೂರಿನ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅನುದಾನದ ವಿಚಾರದಲ್ಲಿ ಜಗಳವಾಡಿ, ಕೈಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ.

ಬೆಂಗಳೂರು, ಸೆಪ್ಟಂಬರ್ 21: ವಿಧಾನಸಭೆಯ ಮೊಗಸಾಲೆಯಲ್ಲಿ ತೋಟಗಾರಿಕೆ ಸಚಿವ ನಾರಾಯಣ ಗೌಡ ಮತ್ತು ಚಿಕ್ಕಮಗಳೂರಿನ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅನುದಾನದ ವಿಚಾರದಲ್ಲಿ ಜಗಳವಾಡಿ, ಕೈಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ವಿಧಾನಸಭೆ ಅಧಿವೇಶನ ನಡುವೆ ಟೀ ವಿರಾಮದ ಮಧ್ಯೆ ಕ್ಯಾಂಟೀನ್ ಆಗಮಿಸಿದ್ದ ಬೆಳ್ಳಿ ಪ್ರಕಾಶ್, ಅತ್ತ ಸಚಿವ ನಾರಾಯಣ ಗೌಡ ಒಳಬರುತ್ತಿದ್ದಂತೆ ಪ್ರಶ್ನೆ ಮಾಡಿದ್ದಾರೆ. ಮಾಸ್ಕ್ ಹಾಕಿಕೊಂಡು ಮಾತಾಡು ಎಂದು ನಾರಾಯಣ ಗೌಡ ಪ್ರತಿಕ್ರಿಯಿಸಿದ್ದಕ್ಕೆ ಏರಿಹೋದ ಬೆಳ್ಳಿ ಪ್ರಕಾಶ್, ಏಕವಚನದಲ್ಲಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರೂ ತಳ್ಳಾಡಿಕೊಂಡಿದ್ದು, ಸ್ಥಳದಲ್ಲಿದ್ದ ಜೆಡಿಎಸ್ ಶಾಸಕ ಅನ್ನದಾನಿ ಸೇರಿದಂತೆ ಸಿಬಂದಿ ಸೇರಿ ಜಗಳ ಬಿಡಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಕೆ.ಎಸ್. ಈಶ್ವರಪ್ಪ, ಸೋಮಣ್ಣ ಮತ್ತಿತರರು ಕ್ಯಾಂಟೀನ್ ನಲ್ಲಿ ಇರುವಾಗಲೇ ಘಟನೆ ನಡೆದಿದ್ದು, ಆಡಳಿತ ಪಕ್ಷ ಬಿಜೆಪಿಗೆ ಮುಜುಗರ ಉಂಟುಮಾಡುವಂತೆ ಮಾಡಿದೆ. ಅಧಿವೇಶನದ ಬಳಿಕ ಪತ್ರಕರ್ತರು ಸಚಿವ ನಾರಾಯಣ ಗೌಡರನ್ನು ಈ ಬಗ್ಗೆ ಪ್ರಶ್ನೆ ಮಾಡಿದಾಗ, ಜಗಳ ಏನು ನಡೆದಿಲ್ಲ. ಪ್ರಕಾಶ್ ಏಕವನಚನದಲ್ಲಿ ಮಾತನಾಡಿದ್ದು ಬೇಜಾರಾಯ್ತು. ವರ್ಗಾವಣೆ ವಿಚಾರದಲ್ಲಿ ಮಾತಾಡಲು ಬಂದಿದ್ದರು. ಹಾಗೆಲ್ಲಾ ಮಾತಾಡೋದು ಸರಿ ಕಾಣಲ್ಲ ಎಂದು ಹೇಳಿದ್ದಾರೆ.