ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ; ಜಾರ್ಜ್ ಗೆ ಸಿಬಿಐ ನೋಟಿಸ್

22-09-20 10:42 am       Headline Karnataka News Network   ಕರ್ನಾಟಕ

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.

ಮಡಿಕೇರಿ, ಸೆಪ್ಟಂಬರ್ 22: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಈ ವಿಚಾರ ಖುಷಿ ತಂದಿದೆ. ಮತ್ತೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಡಿವೈಎಸ್‍ಪಿ ಗಣಪತಿ ತಂದೆ ಕುಶಾಲಪ್ಪ ಹಾಗೂ ಗಣಪತಿ ಸಹೋದರ ಮಚ್ಚಯ್ಯ ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದಲ್ಲಿ ಮಾತಾನಾಡಿದ ಅವರು, ಗಣಪತಿ ಅವರು ಮರಣ ಹೊಂದಿದ ನಂತರ ನ್ಯಾಯಕ್ಕಾಗಿ ಗಣಪತಿ ಕುಟುಂಬಸ್ಥರು ಹೋರಾಟ ನಡೆಸಿದ್ದೆವು. ಇದರ ಫಲವಾಗಿ ಇದೀಗ ಸಿಬಿಐ ತಂಡ ಮತ್ತೆ ತನಿಖೆ ಅರಂಭ ಮಾಡಿದೆ. ಮತ್ತೆ ನಮಗೆ ನ್ಯಾಯ ಸಿಗುವ ಭರವಸೆ ಮೂಡಿದೆ. ನ್ಯಾಯ ಸಿಗೋವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ನಿನ್ನೆ ವಿಧಾನಸೌಧಕ್ಕೆ ಹೋಗಿ ಕೆ.ಜೆ.ಜಾರ್ಜ್ ಅವರಿಗೆ ನೋಟಿಸ್ ನೀಡಿದ್ದಾರೆ. ನ್ಯಾಯ ಹಾಗೂ ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಗಣಪತಿ ತಮ್ಮ ಮಾಚಯ್ಯ ಮತ್ತು ತಂದೆ ಕುಶಾಲಪ್ಪ ತಿಳಿಸಿದರು.

2016ರ ಜುಲೈ 7 ರಂದು ಬೆಳಗ್ಗೆ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ಲಾಡ್ಜ್ ಗೆ ಬಂದ ಗಣಪತಿ ಅವರು ರೂಮ್ ಪಡೆದುಕೊಂಡಿದ್ದರು. ಸಾವಿಗೂ ಮುನ್ನ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದ ಗಣಪತಿ, ಸಚಿವ ಕೆ. ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಎ. ಎಂ. ಪ್ರಸಾದ್ ಅವರುಗಳಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ನಂತರ ಲಾಡ್ಜ್ ನಲ್ಲಿ ಪೊಲೀಸ್ ಯೂನಿಫಾಂನಲ್ಲಿಯೇ ನೇತಾಡುತ್ತಿದ್ದ ಅವರ ದೇಹ ಪತ್ತೆಯಾಗಿತ್ತು.

Join our WhatsApp group for latest news updates