ಕಿರುತೆರೆಗೂ ಡ್ರಗ್ಸ್ ನಂಟು, ಗಟ್ಟಿಮೇಳ, ‘ಬ್ರಹ್ಮಗಂಟು’ ಗಟ್ಟಿಗಿತ್ತಿಯರಿಗೆ ಶಾಕ್ !

22-09-20 12:52 pm       Bangalore Correspondent   ಕರ್ನಾಟಕ

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದಲ್ಲಿ ಕನ್ನಡದ ಕಿರುತೆರೆ ನಟ - ನಟಿಯರು ಕೂಡ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರು 20ಕ್ಕೂ ಹೆಚ್ಚು ಮಂದಿ ಕಿರುತೆರೆ ನಟ - ನಟಿಯರಿಗೂ ನೋಟೀಸ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರು, ಸೆಪ್ಟಂಬರ್ 22: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದಲ್ಲಿ ಕನ್ನಡದ ಕಿರುತೆರೆ ನಟ-ನಟಿಯರು ಕೂಡ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರು 20ಕ್ಕೂ ಹೆಚ್ಚು ಮಂದಿ ಕಿರುತೆರೆ ನಟ-ನಟಿಯರಿಗೂ ನೋಟೀಸ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆಯಷ್ಟೆ ನಟ ಲೂಸ್ ಮಾದ ಮತ್ತು ಕ್ರಿಕೆಟಿಗ ಅಯ್ಯಪ್ಪ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಮೊಬೈಲ್ ಶೋಧಿಸಿ, ಪಾರ್ಟಿ ಕುರಿತ ಮಾಹಿತಿಗಳನ್ನು ಪಡೆದು ಅವರನ್ನು ಬಿಟ್ಟಿದ್ದರು. ಇದಲ್ಲದೆ, ಕಿರುತೆರೆಯಲ್ಲಿ ನಟ-ನಟಿಯರಾಗಿರುವ 20ಕ್ಕೂ ಹೆಚ್ಚು ಮಂದಿಗೆ ಸಿಸಿಬಿ ನೋಟೀಸ್ ನೀಡಿದೆ ಎನ್ನಲಾಗುತ್ತಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್, ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸಿದ್ದ ರಶ್ಮಿತಾ ಚೆಂಗಪ್ಪ ಮತ್ತು ಗಟ್ಟಿಮೇಳ ಧಾರಾವಾಹಿಯ ನಟ ಅಭಿಷೇಕ್ ಗೆ ಸೆ.22ರಂದು ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ರಶ್ಮಿತಾ, ನನಗೆ ಸಿಸಿಬಿ ನೋಟೀಸ್ ನೀಡಿದ್ದಲ್ಲ. ಐಎಸ್ ಡಿಯವರು ನೋಟೀಸ್ ನೀಡಿದ್ದಾರೆ. ನೋಟೀಸ್ ನೀಡಿದ ಮಾತ್ರಕ್ಕೆ ಡ್ರಗ್ ವಹಿವಾಟಿನಲ್ಲಿ ತೊಡಗಿಸಿದ್ದೇನೆ ಎಂದರ್ಥವಲ್ಲ. ನನ್ನ ಹೆಸರು ಬಂದಿದ್ದಕ್ಕೆ ಶಾಕ್ ಆಗಿದೆ. ಕಳೆದ ವಾರವೂ ವಿಚಾರಣೆಗೆ ಕರೆದಿದ್ದರು. ಕೇಳಿದ ಮಾಹಿತಿಗಳನ್ನು ನೀಡಿದ್ದೆ. ಖಚಿತ ಮಾಹಿತಿ ಇಲ್ಲದೆ ಡ್ರಗ್ಸ್ ವಿಚಾರದಲ್ಲಿ ಹೆಸರು ಬಂದಿದ್ದು ನನ್ನ ಬಗ್ಗೆ ಜನರು ಕೆಟ್ಟದಾಗಿ ಮಾತನಾಡುವಂತಾಗಿದೆ. ನಾನೇನು ತಪ್ಪು ಮಾಡಿಲ್ಲ. ಪಾರ್ಟಿಗಳಿಗೆ ಹೋಗಿದ್ದೆ ಅಷ್ಟೇ ಎಂದು ಹೇಳಿದ್ದಾರೆ.

ಈಗಾಗ್ಲೇ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಡ್ರಗ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಇವರ ಕನೆಕ್ಷನ್ ಇದ್ದವರು ಕೂಡ ಅರೆಸ್ಟ್ ಆಗಿದ್ದಾರೆ. ಇವರೆಲ್ಲರ ಮೊಬೈಲ್ ಚಾಟ್ಸ್ ಬಗ್ಗೆ ನಿಗಾ ಇಟ್ಟಿರುವ ಪೊಲೀಸರು ಸಂಪರ್ಕ ಹೊಂದಿದ್ದವರನ್ನು ಒಬ್ಬೊಬ್ಬರಂತೆ ವಿಚಾರಣೆ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆ ನಿರೂಪಕ ಅಕುಲ್ ಬಾಲಾಜಿ ಮತ್ತಿಬ್ಬರನ್ನು ವಿಚಾರಣೆಗೆ ಕರೆದಿದ್ದರು. ಇದೀಗ ಕಿರುತೆರೆ ನಟ-ನಟಿಯರನ್ನೂ ವಿಚಾರಣೆಗೆ ಕರೆಸುತ್ತಿದ್ದು, ಡ್ರಗ್ ಜಾಲ ಕನ್ನಡ ಫಿಲಂ ಮತ್ತು ಸೀರಿಯಲ್ ಇಂಡಸ್ಟ್ರಿಯಲ್ಲಿ ಆಳವಾಗಿ ಬೇರು ಬಿಟ್ಟಿದೆ ಎನ್ನಲಾಗುತ್ತಿದೆ.

Join our WhatsApp group for latest news updates