ಸುರೇಶ್ ಅಂಗಡಿ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ, ದೆಹಲಿಯಲ್ಲೇ ಅಂತ್ಯಕ್ರಿಯೆ !

24-09-20 02:33 pm       Headline Karnataka News Network   ಕರ್ನಾಟಕ

ಕೊರೊನಾ ಸೋಂಕಿನಿಂದ ಮೃತಪಟ್ಟ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಯಲಿದೆ.‌ 

ಬೆಳಗಾವಿ, ಸೆಪ್ಟಂಬರ್ 23: ಕೊರೊನಾ ಸೋಂಕಿನಿಂದ ಮೃತಪಟ್ಟ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಯಲಿದೆ.‌ ನಿಧನರಾದ ಬಳಿಕ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ದೇಹದಲ್ಲಿ ಸೋಂಕು ಇರುವುದು ದೃಢಪಟ್ಟಿದ್ದರಿಂದ ಶವ ಬಿಟ್ಟುಕೊಡಲು ಏಮ್ಸ್ ವೈದ್ಯರು ನಿರಾಕರಿಸಿದ್ದಾರೆ. 

ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ದೆಹಲಿಯ ದ್ವಾರಕಾ ಸೆಕ್ಟರ್-24 ರಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಏಮ್ಸ್ ಆಸ್ಪತ್ರೆಯಲ್ಲೇ ಅಂತಿಮ ದರ್ಶನ ಮಾಡಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸುರೇಶ ಅಂಗಡಿ ಹಿರಿಯ ಪುತ್ರಿ ಡಾಕ್ಟರ್ ಶೃತಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪುತ್ರಿ, ಮೊಮ್ಮಗಳು ಹಾಗೂ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ವಿಧಿವಿಧಾನ ನೇರವೇರಿಸಲು ಲಿಂಗಾಯತ ಸ್ವಾಮೀಜಿ ಬಾಳಯ್ಯ ಕೂಡ ದೆಹಲಿಗೆ ತೆರಳಿದ್ದಾರೆ. 

ಬೆಳಗಾವಿಯಲ್ಲಿ ಮಡುಗಟ್ಟಿದ ಶೋಕ..! 

ಬೆಳಗಾವಿಯಲ್ಲಿ ಅಜಾತ ಶತ್ರು ಎಂದೇ ಕರೆಸಿಕೊಂಡಿದ್ದ ಸುರೇಶ್ ಅಂಗಡಿ ನಿಧನ ಇಡೀ ಜಿಲ್ಲೆಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಬಿಜೆಪಿ, ಕಾಂಗ್ರೆಸ್ ಪ್ರಮುಖರು, ಅವರ ಮನೆಗ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ದಿಢೀರ್ ಆಗಿ ತಮ್ಮನ್ನಗಲಿದ್ದನ್ನು ಅರಗಿಸಿಕೊಳ್ಳಲು ಆಗದೆ ಕುಟುಂಬಸ್ಥರು ತೀವ್ರ ದುಃಖತಪ್ತರಾಗಿದ್ದಾರೆ. ಅವರ ತಾಯಿ, ಪತ್ನಿ ಹಾಗೂ ಮಗಳು, ಸಂಬಂಧಿಕರೆಲ್ಲ ಕಣ್ಣೀರು ಹಾಕುತ್ತಿದ್ದಾರೆ. ಅವರ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ಸುರೇಶ್ ಅಂಗಡಿ ತಾಯಿ ಸೋಮವ್ವ ಅಂಗಡಿಯವರು ತೀವ್ರ ದುಃಖತಪ್ತರಾಗಿದ್ದು, ನನ್ನ ಮಗ ಬರ್ತಾನೆ, ಬಾಗಿಲು ತೆಗೀರಿ.. ಅವನಿಗೆ ಎನೂ ಆಗಿಲ್ಲ ಎಂದು ರೋದಿಸುತ್ತಿದ್ದಾರೆ. ಹಲವು ಸಂಬಂಧಿಕರು ಹಾಗೂ ಸ್ನೇಹಿತರು ಸಹ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಸಹೋದರಿ ಸಹ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಸುರೇಶ್ ಅಂಗಡಿ ನಿವಾಸದ ಬಳಿ ಸೇರಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

Join our WhatsApp group for latest news updates (2)