ಮಂಗಳೂರಿನ ಜನರ ಪ್ರೀತಿಗೆ ವಿನಮ್ರನಾಗಿರುವೆ ; ಕನ್ನಡದಲ್ಲೇ ಟ್ವೀಟ್ ಮಾಡಿ ಕೃತಜ್ಞತೆ ಹೇಳಿದ ಮೋದಿ 

03-09-22 04:01 pm       HK News Desk   ದೇಶ - ವಿದೇಶ

ಪ್ರಧಾನಿ ಮೋದಿ ಮಂಗಳೂರಿಗೆ ಬಂದು ಹೋದ ಬಳಿಕ ಕನ್ನಡದಲ್ಲೇ ಟ್ವೀಟ್ ಮಾಡಿ, ಮಂಗಳೂರಿನ ಜನರ ಪ್ರೀತಿಗೆ ಚಿರ ಋಣಿ ಎಂದು ಹೇಳಿ ಕನ್ನಡಿಗರ ಮನ ಗೆದ್ದಿದ್ದಾರೆ.

ನವದೆಹಲಿ, ಸೆ.3 : ಪ್ರಧಾನಿ ಮೋದಿ ಮಂಗಳೂರಿಗೆ ಬಂದು ಹೋದ ಬಳಿಕ ಕನ್ನಡದಲ್ಲೇ ಟ್ವೀಟ್ ಮಾಡಿ, ಮಂಗಳೂರಿನ ಜನರ ಪ್ರೀತಿಗೆ ಚಿರ ಋಣಿ ಎಂದು ಹೇಳಿ ಕನ್ನಡಿಗರ ಮನ ಗೆದ್ದಿದ್ದಾರೆ.

ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಶುಕ್ರವಾರ ಮಂಗಳೂರಿನ ಗೋಲ್ಡ್​​ ಫಿಂಚ್​​ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮೋದಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಜಯಘೋಷ ಹಾಕಿದ್ದು, ಮೋದಿ, ಮೋದಿ ಎಂಬ ಘೋಷಣೆ ಕೂಗಿದ್ದರು.

ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಮೇಕ್​ ಇನ್​ ಇಂಡಿಯಾ' ವಿಸ್ತರಣೆ ಅಗತ್ಯವಾಗಿದೆ. ದೇಶದಲ್ಲಿ ಮೂಲಭೂತ ಸೌಲಭ್ಯಗಳಲ್ಲಿ ಅಭೂತಪೂರ್ವ ಕಾರ್ಯವಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಬಂದರುಗಳ ಸಾಮರ್ಥ್ಯ ದುಪ್ಪಟ್ಟಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ನಾವು ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಹೇಳಿದ್ದರು.

PM Modi tweets in Kannada after his visit to Mangalore, thanks Mangaloreans.