ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಕೊನೆಯುಸಿರು

01-10-22 10:35 pm       HK News Desk   ದೇಶ - ವಿದೇಶ

ಮಾಜಿ ಗೃಹ ಸಚಿವ, ಕೇರಳ ರಾಜ್ಯ ಸಿಪಿಎಂ ಸೆಕ್ರಟರಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್(68) ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತಿರುವನಂತಪುರಂ, ಅ.1: ಮಾಜಿ ಗೃಹ ಸಚಿವ, ಕೇರಳ ರಾಜ್ಯ ಸಿಪಿಎಂ ಸೆಕ್ರಟರಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್(68) ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

2006-11ರಲ್ಲಿ ವಿ.ಎಸ್.ಅಚ್ಚುತಾನಂದನ್ ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಿಯೇರಿ ಬಾಲಕೃಷ್ಣನ್ ಗೃಹ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಕಳೆದ ಮಾರ್ಚ್ ನಲ್ಲಿ ಕೊಚ್ಚಿಯಲ್ಲಿ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಸತತ ಮೂರನೇ ಬಾರಿಗೆ ಕೊಡಿಯೇರಿ ಅವರನ್ನು ರಾಜ್ಯ ಸೆಕ್ರಟರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

2019ರಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಅವರಿಗೆ ಅಮೆರಿಕದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. 2020ರಲ್ಲಿ ಒಂದು ವರ್ಷ ಕಾಲ ಅಮೆರಿಕದಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದಿದ್ದರು. ಆನಂತರ, ಆರೋಗ್ಯದಲ್ಲಿ ಚೇತರಿಕೆ ಕಂಡು ರಾಜ್ಯಕ್ಕೆ ಮರಳಿದ್ದರು. ಆದರೆ ಕಳೆದ ಎಪ್ರಿಲ್ ತಿಂಗಳಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ, ರಾಜ್ಯ ಕಾರ್ಯದರ್ಶಿ ಜವಾಬ್ದಾರಿಯನ್ನು ಎಂ.ವಿ.ಗೋವಿಂದನ್ ಅವರಿಗೆ ವಹಿಸಲಾಗಿತ್ತು.

ಕೊಡಿಯೇರಿ ಬಾಲಕೃಷ್ಣನ್ ಅವರು ತಲಶ್ಶೇರಿ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದರು. 1982, 1987, 2001, 2006, 2011 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಶಿಕ್ಷಕರ ಮಗನಾಗಿದ್ದ ಬಾಲಕೃಷ್ಣನ್ ಎಸ್ಎಫ್ಐ ಸಂಘಟನೆಯ ಮೂಲಕ ಕಮ್ಯುನಿಸ್ಟ್ ಸೇರಿದ್ದರು. ಆನಂತರ, ರಾಜಕೀಯದಲ್ಲಿ ಸಾಧನೆ ಮಾಡಿ ಎತ್ತರಕ್ಕೇರಿದ್ದರು. 

Former CPM State Secretary Kodiyeri Balakrishnan passed away in Chennai on Saturday. He was 68. One of Kerala's senior-most politicians, Kodiyeri was a member of the CPM politburo, the top decision-making body of the party. Kodiyeri had held the Home and Tourism portfolios in the V S Achuthanandan-led cabinet in 2006-2011. He was also the Deputy Opposition Leader in the State Assembly during 2001-2004 and 2011-2016.