ಭಾರತದ ಜಿಡಿಪಿ ಹಿಂದಿಕ್ಕಲಿದ್ಯಾ ಬಾಂಗ್ಲಾದೇಶ ! ಐಎಂಎಫ್ ವರದಿ ಉಲ್ಲೇಖಿಸಿ ರಾಹುಲ್ ವಾಗ್ದಾಳಿ

14-10-20 09:47 pm       Headline Karnataka News Network   ದೇಶ - ವಿದೇಶ

ನೆರೆಯ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತದ ತಲಾ ಜಿಡಿಪಿಯ ಮಟ್ಟಕ್ಕೆ ತಲುಪುತ್ತಿದೆ ಎಂಬ ಐಎಂಎಫ್ ವರದಿಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ, ಅಕ್ಟೋಬರ್ .14 : ತಲಾ ಜಿಡಿಪಿಯ ಡಾಲರ್ ಲೆಕ್ಕಚಾರದಲ್ಲಿ ಬಾಂಗ್ಲಾದೇಶವು ಭಾರತವನ್ನು ಹಿಂದಿಕ್ಕಲಿದೆ ಎಂದು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ತಿಳಿಸಿರುವ ವಿವರಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ ಆರು ವರ್ಷಗಳ ಸಾಧನೆಯ ಪರಿಣಾಮವಾಗಿ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಲು ಸಜ್ಜಾಗಿದೆ ಎಂದು ಕಿಡಿಕಾರಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಿಶ್ವ ಆರ್ಥಿಕ ದೃಷ್ಟಿಕೋನದ ವರದಿಯನ್ನು ಉಲ್ಲೇಖಿಸಿ ರಾಹುಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತದ ಪ್ರಮಾಣಕ್ಕೆ ತಲುಪುತ್ತಿರುವುದನ್ನು ಸೂಚಿಸುವ ಗ್ರಾಫ್ ಅನ್ನು ಪೋಸ್ಟ್ ಮಾಡಿದ್ದಾರೆ.

10.5% ಕುಸಿತ ಕಂಡಲ್ಲಿ 2021ರ ಮಾರ್ಚ್ ವೇಳೆಗೆ ಭಾರತದ ತಲಾ ಜಿಡಿಪಿ 1877 ಡಾಲರಿಗೆ ಕುಸಿಯಲಿದೆ ಎಂದು ಐಎಂಎಫ್ ತಿಳಿಸಿದೆ. ಇತ್ತ ಬಾಂಗ್ಲಾದೇಶ ತಲಾ ಜಿಡಿಪಿ $ 1888ಕ್ಕೆ, ಅಂದರೆ 4% ಏರಿಕೆ ಕಾಣಲಿದೆ. ಕಳೆದ ಕೆಲವು ವರ್ಷಗಳ ಹಿಂದೆ ತಲಾ ಜಿಡಿಪಿ ಲೆಕ್ಕದಲ್ಲಿ ಬಾಂಗ್ಲಾದೇಶಕ್ಕಿಂತ ಭಾರತ ಬಹಳ ಮುಂದಿತ್ತು.

ಆದರೆ, ಭಾರತದ ಉಳಿತಾಯ, ಹೂಡಿಕೆ ನಿಧಾನವಾಗುತ್ತಾ ಸಾಗಿತು ಹಾಗೂ ಬಾಂಗ್ಲಾದೇಶ ಇದರಲ್ಲಿ ಏರಿಕೆ ಕಂಡಿತು. ಇನ್ನು ಪ್ರಾದೇಶಿಕವಾಗಿ ಹೇಳಬೇಕು ಅಂದರೆ, ಪಾಕಿಸ್ತಾನ ಮತ್ತು ನೇಪಾಳ ಇವೆರಡಕ್ಕಿಂತ ಮಾತ್ರ ತಲಾ ಜಿಡಿಪಿಯಲ್ಲಿ ಭಾರತ ಮುಂದೆ ಇರಲಿದೆ. ಜಿಡಿಪಿ ದರ ಮತ್ತಷ್ಟು ಕುಸಿತ ಕಂಡಲ್ಲಿ ದಕ್ಷಿಣ ಏಷ್ಯಾ ದೇಶಗಳಾದ ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಹಾಗೂ ಬಾಂಗ್ಲಾದೇಶ ಕೂಡ ಭಾರತದ ತಲಾ ಜಿಡಿಪಿಗಿಂತ ಮುಂದೆ ಬರಲಿದೆ. 

ಸಮಾಧಾನಕರ ಸಂಗತಿಯೆಂದರೆ ಭಾರತದ ಆರ್ಥಿಕತೆ 2021ರಲ್ಲಿ ಶೇ. 8.8ರಷ್ಟು ಪ್ರಗತಿ ಕಂಡು ಮತ್ತೆ ಪುಟಿದೇಳಲಿದೆ ಹಾಗೂ ಚೀನಾವನ್ನೂ ಹಿಮ್ಮೆಟ್ಟಿಸಿ ಶೇ. 8.2ರಷ್ಟು ಪ್ರಗತಿ ದರದೊಂದಿಗೆ ಜಗತ್ತಿನ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ

Bangladesh is set to overtake India in terms of per capita Gross Domestic Product (GDP) in 2020-21, according to the latest forecast shared by the International Monetary Fund (IMF).