ಸಂಬಳ ಸಾಲದೇ ಬ್ರಿಟನ್ ಪ್ರಧಾನಿ ರಾಜೀನಾಮೆ !!!

21-10-20 12:04 pm       Headline Karnataka News Network   ದೇಶ - ವಿದೇಶ

ಬ್ರಿಟನ್ ಪ್ರಧಾನಮಂತ್ರಿ ಬೊರಿಸ್ ಜಾನ್ಸನ್ ಅವರಿಗೆ ಈ ಹಿಂದಿನ ವೇತನಕ್ಕೆ ಹೋಲಿಸಿದರೆ ಈಗಿನ ವೇತನ ಕಡಿಮೆಯಾಗಿರುವುದರಿಂದ ಅವರು ಮುಂದಿನ ಮಾರ್ಚ್ ವೇಳೆಗೆ ರಾಜೀನಾಮೆ ನೀಡಲಿದ್ದಾರೆ

ಲಂಡನ್,ಅಕ್ಟೋಬರ್.21 : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮಗೆ ಕಡಿಮೆ ಸಂಬಳ ನೀಡುತ್ತಿರುವುದರಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ  ಮುಂದಿನ ಮಾರ್ಚ್ ವೇಳೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪ್ರಧಾನಿಯ ಸಂಬಳದ ವಿಷಯಕ್ಕೆ ಬರುವುದಾದರೆ, ಸದ್ಯ ಬೋರಿಸ್​ ಜಾನ್ಸನ್​ ಅವರು, 1.50 ಲಕ್ಷ ಡಾಲರ್ ವೇತನ ವಾರ್ಷಿಕವಾಗಿ ಪಡೆಯುತ್ತಿದ್ದಾರೆ. ಅಂದರೆ ಸುಮಾರು 1.10 ಕೋಟಿ ರೂಪಾಯಿಗಳು. ಆದರೆ ತಮಗೆ ಈ ಸಂಬಳ ಸಾಕಾಗುತ್ತಿಲ್ಲ ಎನ್ನುವುದು ಅವರ ವಾದ.

ಈ ಹಿಂದೆ ಬೋರಿಸ್​ ಅವರು ದಿ ಟೆಲಿಗ್ರಾಫ್ ಪತ್ರಿಕೆಗೆ ಅಂಕಣಕಾರರಾಗಿದ್ದರು. ಆದರೆ ಅವರಿಗೆ ಸಿಗುತ್ತಿದ್ದುದು ವರ್ಷಕ್ಕೆ 2.75 ಲಕ್ಷ ಡಾಲರ್, ಅಂದರೆ ಸುಮಾರು 1.84 ಕೋಟಿ ರೂಪಾಯಿಗಳು, ಇದರ ಜತೆಗೆ ತಿಂಗಳಲ್ಲಿ ಎರಡು ಭಾಷಣ ಮಾಡಿ ಅವರು 1.60 ಲಕ್ಷ ಡಾಲರ್ ಸಂಪಾದಿಸುತ್ತಿದ್ದರು. ಇದಕ್ಕೆ ಹೋಲಿಸಿದರೆ ತಮ್ಮ ವೇತನ ಅತ್ಯಲ್ಪ ಎಂದಿದ್ದಾರೆ ಬೋರಿಸ್​.

ಬೊರಿಸ್ ಗೆ ಆರು ಮಕ್ಕಳಿದ್ದಾರೆ. ಕೆಲವರು ಸಣ್ಣವರಿರುವ ಕಾರಣ ಅವರಿಗೆ ಹಣಕಾಸು ನೆರವಿನ ಅಗತ್ಯವಿದೆ.ವಿಚ್ಛೇದನದ ಒಪ್ಪಂದ ಪ್ರಕಾರ ಮಾಜಿ ಪತ್ನಿ ಮರಿನಾ ವೀಲರ್ ಗೂ ಹಣವನ್ನು ಪಾವತಿಸಬೇಕಾಗಿದೆ ಎಂದು ಕನ್ಸರ್ವೇಟಿವ್ ಪಕ್ಷದ ಸಂಸದರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮಿರರ್ ವರದಿ ಮಾಡಿದೆ