ಕಾಶ್ಮೀರ ಗಡಿಭಾಗದಲ್ಲಿ ಡ್ರೋಣ್ ಬಾಂಬ್ ದಾಳಿಗೆ ಪಾಕ್ ಸಂಚು !

21-10-20 02:09 pm       Headline Karnataka News Network   ದೇಶ - ವಿದೇಶ

ಗಡಿಭಾಗದಲ್ಲಿ ಬೀಡು ಬಿಟ್ಟಿರುವ ಭಾರತದ ಭದ್ರತಾ ಪಡೆಗಳ ಮೇಲೆ ಡ್ರೋಣ್ ಮೂಲಕ ಬಾಂಬ್ ದಾಳಿ ನಡೆಸಲು ಪಾಕಿಸ್ಥಾನದ ಐಎಸ್ಐ ಮತ್ತು ಉಗ್ರರು ಯೋಜನೆ ಹಾಕಿದ್ದಾರೆ.

ನವದೆಹಲಿ, ಅಕ್ಟೂಬರ್ 21: ಜಮ್ಮು ಕಾಶ್ಮೀರದಲ್ಲಿ ಶಾಂತಿ ಮರು ಸ್ಥಾಪನೆ ಮಾಡುತ್ತಿರುವ ಸೇನಾ ಪಡೆಗಳ ಮೇಲೆ ಪಾಕಿಸ್ಥಾನ, ಡ್ರೋಣ್ ಮೂಲಕ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿರುವ ಮಾಹಿತಿ ಹೊರಬಿದ್ದಿದೆ.

ಸಿರಿಯಾದಲ್ಲಿ ಭದ್ರತಾ ಪಡೆಗಳ ಮೇಲೆ ಐಸಿಸ್ ಭಯೋತ್ಪಾದಕರು ಡ್ರೋಣ್ ದಾಳಿ ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ಗಡಿಭಾಗದಲ್ಲಿ ಬೀಡು ಬಿಟ್ಟಿರುವ ಭಾರತದ ಭದ್ರತಾ ಪಡೆಗಳ ಮೇಲೆ ಡ್ರೋಣ್ ಮೂಲಕ ಬಾಂಬ್ ದಾಳಿ ನಡೆಸಲು ಪಾಕಿಸ್ಥಾನದ ಐಎಸ್ಐ ಮತ್ತು ಉಗ್ರರು ಯೋಜನೆ ಹಾಕಿದ್ದಾರೆ. ಕಡಿಮೆ ಬೆಲೆಯ ಡ್ರೋಣ್ ಗಳನ್ನು ಬಳಸಿ, ಈ ದಾಳಿ ನಡೆಸಲು ಪಾಕಿಸ್ಥಾನದ ಐಎಸ್ಐ ಸಂಚು ರೂಪಿಸಿದೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಕಳೆದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಜೈಷ್ ಮತ್ತು ಲಷ್ಕರ್ ಉಗ್ರವಾದಿ ಗುಂಪುಗಳ ಪ್ರಮುಖರ ಜೊತೆ ಐಎಸ್ಐ ಈ ಬಗ್ಗೆ ಚರ್ಚೆ ನಡೆಸಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಸಭೆಯಲ್ಲಿ ಮೂರು ಕಿಮೀ ವ್ಯಾಪ್ತಿಯ ಮತ್ತು 5 ಕೆಜಿ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲ ಡ್ರೋಣ್ ಗಳನ್ನು ಬಳಸಲು ಯೋಜನೆ ಹಾಕಲಾಗಿದೆ ಎನ್ನುವ ವಿಚಾರ ಹೊರಬಿದ್ದಿದೆ.

ಪಾಕಿಸ್ಥಾನದ ಕುತಂತ್ರಕ್ಕೆ ಭಾರತದ ಸೇನಾ ಪಡೆಯೂ ತಂತ್ರ ಹೂಡಿದ್ದು, ಯಾವುದೇ ಡ್ರೋಣ್ ಕಂಡುಬಂದರೂ ಹೊಡೆದುರುಳಿಸಲು ಸನ್ನದ್ಧವಾಗಿದೆ. ಗಡಿಭಾಗದಲ್ಲಿ ರಾಡಾರ್ ವ್ಯವಸ್ಥೆಯನ್ನು ಬಲಪಡಿಸಿದ್ದು, ಡ್ರೋಣ್ ಪತ್ತೆಗೆ ಸ್ಥಳೀಯ ಭದ್ರತಾ ಪಡೆಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಗಡಿಭಾಗದಲ್ಲಿ ಶಸ್ತ್ರಾಸ್ತ್ರ, ನಕಲಿ ಕರೆನ್ಸಿ, ಮಾದಕ ವಸ್ತು ಸಾಗಿಸಲು ಪಾಕ್ ಉಗ್ರರು ಡ್ರೋಣ್ ಬಳಕೆ ಮಾಡುತ್ತಿರುವುದನ್ನು ಈಗಾಗಲೇ ಸೇನಾಪಡೆ ಪತ್ತೆ ಮಾಡಿದ್ದು, ಹಲವು ಬಾರಿ ಡ್ರೋಣ್ ಗಳನ್ನು ಹೊಡೆದುರುಳಿಸಿತ್ತು.