ಫ್ರೀಜರ್ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಜನ ಸಾವು !!

21-10-20 05:29 pm       Headline Karnataka News Network   ದೇಶ - ವಿದೇಶ

ಒಂದು ವರ್ಷ ಫ್ರೀಜರ್ ನಲ್ಲಿಟ್ಟಿದ್ದ ಕಾರ್ನ್ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಜನ ಸಾವನ್ನಪ್ಪಿದ್ದಾರೆ.

ಚೀನಾ,ಅಕ್ಟೋಬರ್ 21 : ಒಂದೇ ಕುಟುಂಬದ ಒಂಬತ್ತು ಜನ  ಸದಸ್ಯರು ಮನೆಯಲ್ಲಿ ಕಾರ್ನ್ ನೂಡಲ್ಸ್ ತಿಂದು ಸಾವನ್ನಪ್ಪಿರುವ ಘಟನೆ ಈಶಾನ್ಯ ಚೀನಾದ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಜಿಕ್ಸಿ ನಗರದಲ್ಲಿ ನಡೆದಿದೆ. 

ಹುದುಗಿಸಿದ ಜೋಳದ ಹಿಟ್ಟಿನ ನೂಡಲ್​ ಅನ್ನು ಸುಮಾರು ಒಂದು ವರ್ಷಗಳ ಕಾಲ ಫ್ರಿಡ್ಜ್​​ನಲ್ಲಿ ಇಡಲಾಗಿತ್ತು. ಅದನ್ನು ಗಮನಿಸದೆ ಕುಟುಂಬ ಸೇವಿಸಿದೆ. ನೂಡಲ್ಸ್​ನಲ್ಲಿದ್ದ ಬೊಂಗ್ರೆಕಿಕ್ ವಿಷಕಾರಿ ಆಮ್ಲದ ಪರಿಣಾಮ ಎಲ್ಲರೂ ಮೃತಪಟ್ಟಿದ್ದಾರೆ.

ಸ್ಯೂಡೋಮೊನಸ್ ಕೊಕೊವೆನೆನಾನ್ಸ್ ಎಂಬ ಬ್ಯಾಕ್ಟೀರಿಯನಿಂದ ಉತ್ಪತ್ತಿಯಾಗುವ ಬೊಂಗ್ರೆಕಿಕ್ ಆಮ್ಲದ ಹೆಚ್ಚಿನ ಸಾಂದ್ರತೆಯು ಕಾರ್ನ್ ನೂಡಲ್ಸ್ನಲ್ಲಿ ಪತ್ತೆಯಾಗಿದೆ, ಜೊತೆಗೆ ಅನಾರೋಗ್ಯಕ್ಕೆ ಒಳಗಾದವರ ದೇಹದಲ್ಲಿ ಗ್ಯಾಸ್ಟ್ರಿಕ್ ದ್ರವದಲ್ಲಿ ಪತ್ತೆಯಾಗಿದೆ ಎಂದು  ಆರೋಗ್ಯ ಆಯೋಗ ತಿಳಿಸಿದೆ.

ಅಕ್ಟೋಬರ್ 5 ರ ಬೆಳಿಗ್ಗೆ 12 ಸದಸ್ಯರ ಕುಟುಂಬ ಕೂಟದಲ್ಲಿ, ಒಂಬತ್ತು ಜನ ಹುದುಗಿಸಿದ ಜೋಳದ ಹಿಟ್ಟಿನಿಂದ ತಯಾರಿಸಿದ ದಪ್ಪವಾದ ನೂಡಲ್ ಅನ್ನು ತಿಂದಿದ್ದರು. ಅಕ್ಟೋಬರ್​ 10ರಂದು 8 ಜನ ಮೃತಪಟ್ಟರೆ, ಕೊನೆಯಲ್ಲಿ ಸೂಪ್​ ಕುಡಿದು ಬದುಕುಳಿದಿದ್ದ ಮಹಿಳೆ ಸೋಮವಾರ ಸಾವಿಗೀಡಾಗಿದ್ದಾರೆ. ಆದರೆ  ಅದೃಷ್ಟವಶಾತ್ ಕುಟುಂಬದ ಮೂವರು  ಮಕ್ಕಳು ನೂಡಲ್ಸ್   ತಿನ್ನಲು ನಿರಾಕರಿಸಿದ್ದರು.

ಬೊಂಗ್ರೆಕಿಕ್ ಆಸಿಡ್, ಲಿವರ್​, ಕಿಡ್ನಿ, ಹೃದಯ ಮತ್ತು ಮೆದುಳು ಒಳಗೊಂಡಂತೆ ಅನೇಕ ಅಂಗಗಳಿಗೆ ಗಂಭೀರವಾಗ ಹಾನಿಯುಂಟು ಮಾಡಬಲ್ಲದು. ಒಮ್ಮೆ ವಿಷ ಸೇವಿಸಿದರೆ, ಸಾವಿನ ಪ್ರಮಾಣವು ಶೇ. 40 ರಿಂದ 100% ವರೆಗೆ ಇರುತ್ತದೆ. ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿದಾಗ ಬೊಂಗ್ರೆಕಿಕ್ ಆಸಿಡ್ ತಡೆಯಬಹುದು. ಇದೊಂದು ಮಾರಣಾಂತಿಕ ವಿಷ. ಹುದುಗಿಸಿದ ತೆಂಗಿನಕಾಯಿಯಿಂದಲೂ ಇದು ಉತ್ಪತಿಯಾಗುತ್ತದೆ ಎಂದು ಹೆಲಾಂಗ್ಜಿಯಾಂಗ್​ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಆಹಾರ ಸುರಕ್ಷತಾ ನಿರ್ದೇಶಕ ಗಾವೋ ಫೈ ತಿಳಿಸಿದ್ದಾರೆ

 ಕಲುಷಿತ ಆಹಾರ ಸೇವಿಸಿದ ಕೆಲವೇ ಗಂಟೆಗಳಲ್ಲಿ ಬೊಂಗ್ರೆಕಿಕ್ ಆಸಿಡ್ ರೋಗ ಲಕ್ಷಣಗಳು ಆರಂಭವಾಗುತ್ತವೆ. ಹೊಟ್ಟೆ ನೋವು, ಬೆವರುವುದು, ದೌರ್ಬಲ್ಯ ಮತ್ತು ಕೊನೆಯಲ್ಲಿ ಕೋಮಾಗೆ ಜಾರುತ್ತಾರೆ. 24 ಗಂಟೆಗಳಲ್ಲೇ ಸಾವು ಸಂಭವಿಸುತ್ತದೆ ಎಂದು   ಗಾವೋ ಮಾಹಿತಿ ನೀಡಿದ್ದಾರೆ.