ತಮಿಳುನಾಡಿನಲ್ಲಿ ಮನುಸ್ಮೃತಿ ವಿವಾದ ; ಬಿಜೆಪಿ ನಾಯಕಿ ಖುಷ್ಬು ಪೊಲೀಸ್ ವಶಕ್ಕೆ

27-10-20 12:38 pm       Headline Karnataka News Network   ದೇಶ - ವಿದೇಶ

ಬಿಜೆಪಿಗೆ ಸೇರ್ಪಡೆಯಾಗಿ ಸುದ್ದಿ ಮಾಡಿದ್ದ ಚಿತ್ರನಟಿ ಖುಷ್ಬು ಸುಂದರ್ ಅವರನ್ನು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಚೆನ್ನೈ, ಅಕ್ಟೋಬರ್ 27: ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿ ಸುದ್ದಿ ಮಾಡಿದ್ದ ಚಿತ್ರನಟಿ ಖುಷ್ಬು ಸುಂದರ್ ಅವರನ್ನು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಹಿಂದುಗಳ ಧಾರ್ಮಿಕ ಗ್ರಂಥ ಮನುಸ್ಮತಿ ಮಹಿಳೆಯರನ್ನು ಕೀಳಾಗಿ ಕಾಣುತ್ತದೆ. ಅಲ್ಲದೆ, ಮನು ಧರ್ಮದಲ್ಲಿ ಮಹಿಳೆಯರನ್ನು ಲೈಂಗಿಕ ಕಾರ್ಯಕರ್ತೆಯರಂತೆ ಬಿಂಬಿಸುತ್ತದೆ ಎಂದು ವಿದುತಲೈ ಚಿರುತೈಗಲ್ ಕಚ್ಚಿ(ವಿಸಿಕೆ) ಮುಖ್ಯಸ್ಥ ಥೋಲ್ ತಿರುಮಾವಾಲವನ್ ಇತ್ತೀಚೆಗೆ ಭಾಷಣ ಒಂದರಲ್ಲಿ ಅಭಿಪ್ರಾಯಪಟ್ಟಿದ್ದರು. ರಾಜಕಾರಣಿಗಳು ಮನುಸ್ಮೃತಿಯನ್ನು ನಿಷೇಧಿಸಬೇಕೆಂದು ಅವರು ಆಗ್ರಹಿಸಿದ್ದರು.

ವಿಸಿಕೆ ಮುಖ್ಯಸ್ಥರ ಹೇಳಿಕೆಯನ್ನು ಖಂಡಿಸಿ ಬಿಜೆಪಿಯ ಮಹಿಳಾ ವಿಭಾಗ ತಮಿಳುನಾಡಿನಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಕಡಲೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಖುಷ್ಬೂ ತೆರಳುತ್ತಿದ್ದ ಹಾದಿಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕಡಲೂರಿನಲ್ಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಬಿಜೆಪಿ ತಿರುಮಾವಾಲವನ್ ತನ್ನ ಹೇಳಿಕೆಗೆ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ. 

ನಾನು ಮನುಸ್ಮೃತಿಯನ್ನು ಮಾತ್ರ ಉಲ್ಲೇಖಿಸಿದ್ದೇನೆ. ಮನುಸ್ಮೃತಿಯನ್ನು ನಿಷೇಧಿಸಬೇಕಾಗಿದೆ. ಘರ್ಷಣೆಯನ್ನು ಪ್ರಚೋದಿಸಲು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ತಿರುಮಾವಾಲವನ್ ಹೇಳಿದ್ದಾರೆ.

BJP leader Kushboo and her supporters taken under preventive custody by police near Thiruporur.