ಕೇವಲ ಒಂದು ರೂಪಾಯಿಗೆ ಇಲ್ಲಿ ಸಿಗುತ್ತೆ ಹೊಟ್ಟೆ ತುಂಬಾ ಊಟ!!

28-10-20 03:44 pm       Headline Karnataka News Network   ದೇಶ - ವಿದೇಶ

ರಾಜಧಾನಿ ದೆಹಲಿಯ ಶ್ಯಾಮ್ ರಸೋಯಿ ಎನ್ನುವ ಹೊಟೇಲ್ ನಲ್ಲಿ ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಊಟ!!

ದೆಹಲಿ, ಅಕ್ಟೋಬರ್ 28 : ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಆಹಾರ ನೀಡಲು ಸಾಧ್ಯವೇ ?  ರಾಜಧಾನಿ ದೆಹಲಿಯ ಶ್ಯಾಮ್ ರಸೋಯಿ ಎನ್ನುವ ಹೊಟೇಲ್, ಈ ಹೊಸ ವರಸೆಯಿಂದಾಗಿ ದೆಹಲಿಯ ಸ್ಟಾರ್​ ರೆಸ್ಟೋರೆಂಟ್​ ಗಳಿಗೇ ಠಕ್ಕರ್ ನೀಡಿದೆ. 

ದೆಹಲಿಯ ಪರ್ವಿನ್ ಕುಮಾರ್ ಗೋಯಲ್ ಕೇವಲ ಒಂದು ರೂಪಾಯಿಗೆ ಜನರಿಗೆ ಹೊಟ್ಟೆ ತುಂಬುವಷ್ಟು ಆಹಾರದ ಥಾಲಿಯನ್ನು ನೀಡುತ್ತಿದ್ದಾರೆ. ಭುಟ್ಟೋ ವಾಲಿ ಗಲ್ಲಿಯ ನಂಗ್ಲಾಯ್‌ನ ಶ್ಯಾಮ್ ಕಿಚನ್‌ನಲ್ಲಿ ಬೆಳಿಗ್ಗೆ 11 ರಿಂದ ಮಧಾಹ್ನ 1 ರವರೆಗೆ ಕೇವಲ 1 ರೂ.ಗೆ ಒಂದು ಪ್ಲೇಟ್ ಥಾಲಿ ಸಿಗುತ್ತದೆ .

ಕೇವಲ ಬಡವರು ಮಾತ್ರವಲ್ಲದೆ ಎಲ್ಲಾ ರೀತಿಯ ಜನರು ನಂಗ್ಲೋಯಿ ಶ್ಯಾಮ್ ರಸೋಯಿ ಹೊರಗೆ 1  ರೂ. ಊಟಕ್ಕಾಗಿ ಕ್ಯೂ ನಿಲ್ಲುತ್ತಾರೆ.

ಕಳೆದ ಎರಡು ತಿಂಗಳಿನಿಂದ ಶ್ಯಾಮ್ ರಸೋಯಿ ನಡೆಸುತ್ತಿರುವ ಪರ್ವಿನ್ ಕುಮಾರ್ ಗೋಯಲ್ , "ಪ್ರತಿದಿನ ನಾವು ಇಲ್ಲಿ 1,000 ರಿಂದ 1,100 ಜನರಿಗೆ ಆಹಾರವನ್ನು ನೀಡುತ್ತೇವೆ ಮತ್ತು ಹತ್ತಿರದ ಪ್ರದೇಶಗಳಾದ ಇಂದರ್‌ಲೋಕ್, ಸಾಯಿ ಮಂದಿರದಂತಹ ಮೂರು ಪ್ರದೇಶಗಳಿಗೆ ಇ-ರಿಕ್ಷಾಗಳ ಮೂಲಕ ಪಾರ್ಸೆಲ್ ಅನ್ನು ಒದಗಿಸುತ್ತೇವೆ. ಒಟ್ಟಾರೆಯಾಗಿ ಸುಮಾರು 2,000 ಮಂದಿ ಜನರು ಶ್ಯಾಮ್ ಕಿ ರಸೋಯಿ ಯಲ್ಲಿ ತಯಾರಾದ ಊಟವನ್ನು ಸವಿಯುತ್ತಾರೆ ಎಂದು ಹೇಳಿದ್ದಾರೆ. 

ನಾವು ಜನರಿಂದ ದೇಣಿಗೆ ಪಡೆಯುತ್ತೇವೆ. ಕಳೆದ ಎರಡು ತಿಂಗಳಿನಿಂದ ಇದನ್ನು ನಡೆಸುತ್ತಿದ್ದು ಜನರು ಡಿಜಿಟಲ್ ಪಾವತಿ ಮೂಲಕ ನಮಗೆ ಸಹಾಯ ಮಾಡುತ್ತಾರೆ. ಎಲ್ಲಿಯವರೆಗೆ ಜನರ ಸಹಾಯ ಇರುತ್ತದೆ, ಅಲ್ಲಿಯವರೆಗೆ ಇದನ್ನು ನಡೆಸುತ್ತೇನೆ" ಎಂದು ಅವರು ಹೇಳಿದ್ದಾರೆ. 

ಗೋಯಲ್ ಆರು ಮಂದಿಯನ್ನು ಕೆಲಸಕ್ಕಿಟ್ಟು ಅವರಿಗೆ ದಿನ ಮಾರಾಟದ ಆಧಾರದಲ್ಲಿ ದಿನಕ್ಕೆ 300-400 ರೂ. ನೀಡುತ್ತಾರೆ. ಈ ಮೊದಲು ಥಾಲಿಗೆ 10 ರೂ. ಯಂತೆ ಮಾರಾಟ ಮಾಡುತ್ತಿದ್ದ ಪರ್ವಿನ್ ಕಳೆದ ಎರಡು ತಿಂಗಳುಗಳಿಂದ ಹೆಚ್ಚಿನ ಜನರನ್ನು ಆಕರ್ಷಿಸಲು 1 ರೂ.ಗೆ ಇಳಿಸಿದ್ದಾರೆ. 

ರಂಜೀತ್ ಸಿಂಗ್ ಎಂಬ ಉದ್ಯಮಿ ಗೋಯಲ್‌ಗೆ ಜಾಗವನ್ನು ಒದಗಿಸಿದ್ದಾರೆ. ಎನ್‌ಜಿಟಿ ಕಾರ್ಖಾನೆಯನ್ನು ಮುಚ್ಚಿದ್ದರಿಂದ ಅದು ಖಾಲಿಯಾಗಿತ್ತು. ಗೋಯಲ್ ನನ್ನ ಬಳಿಗೆ ಬಂದಾಗ ನಾನು ಅವರಿಗೆ ಈ ಜಾಗವನ್ನು ಕೊಟ್ಟಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

ಪ್ಲ್ಯಾಟರ್ ಅಕ್ಕಿ, ರೊಟ್ಟಿ, ಸೋಯಾ ಪುಲಾವ್, ಪನೀರ್, ಸೋಯಾಬೀನ್ ಮತ್ತು ಹಲ್ವಾ ಮುಂತಾದ ಆಹಾರವನ್ನು ನಂಗ್ಲಾಯ್‌ನ ಶ್ಯಾಮ್ ಕಿಚನ್‌ನಲ್ಲಿ ತಯಾರಿಸುತ್ತಾರೆ ಹಾಗೂ ಪ್ರತಿದಿನ ಮೆನು ಬದಲಾಗುತ್ತಿರುತ್ತದೆ. ಅದೇನೇ ಇರಲಿ ಒಂದು ರೂಪಾಯಿಗೆ ಚಾಕಲೇಟ್ ಕೂಡ ಸಿಗದ ಈ ಕಾಲದಲ್ಲಿ ಹೊಟ್ಟೆ ತುಂಬಾ ಊಟ ನೀಡುತ್ತಿರುವ ಪರ್ವಿನ್ ಕುಮಾರ್ ಅವರಿಗೆ ಒಂದು ಸಲಾಂ.