ಯುರೋಪ್ ರಾಷ್ಟ್ರಗಳಿಗೆ 2ನೇ ಹಂತದ ಸೋಂಕು ಭಯ ; ಫ್ರಾನ್ಸ್ ನಲ್ಲಿ ದಿಢೀರ್ ಲಾಕ್ಡೌನ್ !!

29-10-20 08:55 pm       Headline Karnataka News Network   ದೇಶ - ವಿದೇಶ

ಯುರೋಪ್ ರಾಷ್ಟ್ರಗಳಲ್ಲಿ ಎರಡನೇ ಹಂತದ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ದೇಶಾದ್ಯಂತ ದಿಢೀರ್ ಲಾಕ್ಡೌನ್ ಘೋಷಣೆ ಮಾಡಿದ್ದಾರೆ

ಪ್ಯಾರಿಸ್, ಅಕ್ಟೋಬರ್ 29 : ಯುರೋಪ್ ರಾಷ್ಟ್ರಗಳಲ್ಲಿ ಎರಡನೇ ಹಂತದ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ದೇಶಾದ್ಯಂತ ದಿಢೀರ್ ಲಾಕ್ಡೌನ್ ಘೋಷಣೆ ಮಾಡಿದ್ದು ಡಿಸೆಂಬರ್ 1ರ ವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದಿದ್ದಾರೆ. 

ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಫ್ರಾನ್ಸ್ ನಲ್ಲಿ ಎರಡನೇ ಬಾರಿ ಲಾಕ್ ಡೌನ್ ಹೇರಲಾಗಿದೆ. ರೆಸ್ಟೋರೆಂಟ್, ಬಾರ್ ಗಳಿಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದು ಅಗತ್ಯ ಸೌಲಭ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಆರ್ಥಿಕತೆಗೆ ಪೆಟ್ಟು ಬೀಳದಂತೆ ಸಾರ್ವಜನಿಕ ಉದ್ದಿಮೆಗಳು, ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ. 

ಕೊರೊನಾ ವೈರಸ್ ಫ್ರಾನ್ಸ್ ದೇಶದ ಎಲ್ಲೆಡೆ ಹರಡುತ್ತಿದ್ದು ನವೆಂಬರ್ ತಿಂಗಳಲ್ಲಿ ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಮ್ಯಾಕ್ರನ್ ಹೇಳಿದ್ದಾರೆ. 

ಇನ್ನು ಪ್ಯಾರಿಸ್ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಎರಡು ವಾರಗಳ ಹಿಂದೆ ಕರ್ಫ್ಯೂ ಹಾಕಲಾಗಿತ್ತು. ಆದರೆ, ಅದು ವಿಫಲವಾಗಿದೆ ಎನ್ನಲಾಗುತ್ತಿದೆ. ಫ್ರಾನ್ಸ್ ನಲ್ಲಿ ಕೊರೊನಾ ಸೋಂಕಿಗೆ ಈಗಾಗಲೇ 35 ಸಾವಿರ ಮಂದಿ ಬಲಿಯಾಗಿದ್ದಾರೆ. ಯುರೋಪ್ ನ ಇತರ ಭಾಗದಲ್ಲಿಯೂ ಎರಡನೇ ಹಂತದ ಕೊರೊನಾ ಸೋಂಕು ಮೊದಲ ಹಂತಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇರಲಿದೆ ಎಂದು ಮ್ಯಾಕ್ರನ್ ಹೇಳಿದ್ದಾರೆ. 

ಸದ್ಯಕ್ಕೆ ಮೂರು ಸಾವಿರ ಇಂಟೆನ್ಸಿವ್ ಕೇರ್ ಬೆಡ್ ಫುಲ್ ಆಗಿದ್ದು ನವೆಂಬರ್ ವೇಳೆಗೆ ಅದು 9 ಸಾವಿರಕ್ಕೆ ತಲುಪಲಿದೆ ಎನ್ನುವ ಅಂದಾಜಿದೆ. ಸದ್ಯಕ್ಕೆ 5800 ಐಸಿಯು ಕೆಪಾಸಿಟಿ ಇದ್ದು ಅದನ್ನು ಹತ್ತು ಸಾವಿರಕ್ಕೆ ಏರಿಸುವ ಗುರಿಯಿದೆ ಎಂದಿದ್ದಾರೆ ಮ್ಯಾಕ್ರನ್. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಲಾಕ್ಡೌನ್ ಬಳಿಕದ ಎರಡು ವಾರಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ ಸಡಿಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.