ಮನೆಗೆ ಎಂಟ್ರಿ ಕೊಟ್ಟಿದ್ದ ಆಗಂತುಕ, ಮಹಿಳೆಯನ್ನು ಎಚ್ಚರಿಸಿತ್ತು ನಾಯಿ !

31-10-20 09:44 pm       Headline Karnataka News Network   ದೇಶ - ವಿದೇಶ

ಏಳು ವರ್ಷದ ಪುತ್ರಿಯ ಜೊತೆ ಮನೆಯಲ್ಲಿದ್ದ ಮಹಿಳೆಯ ಮನೆಗೆ ಯುವಕನೊಬ್ಬ ಕಳ್ಳ ದಾರಿಯಲ್ಲಿ ಬಂದಿದ್ದನ್ನು ಕಂಡು ಮನೆ ನಾಯಿ ಮೆನೆಯೊಡತಿಯನ್ನು ಎಚ್ಚರಿಸಿದೆ.

ಮುಂಬೈ, ಅಕ್ಟೋಬರ್ 31: ನಾಯಿ ಮನುಷ್ಯನ ನಂಬಿಕಸ್ಥ ಪ್ರಾಣಿ ಅಂತಾರೆ. ಕೆಲವರಿಗಂತೂ ನಾಯಿಯೇ ಪ್ರಾಣ ಸ್ನೇಹಿತ. ಇಂಥಾ ನಾಯಿ ಮುಂಬೈನಲ್ಲೊಂದು ಮಹಿಳೆಯನ್ನು ಲೈಂಗಿಕ ಕಿರುಕುಳ ನೀಡಲು ಬಂದಿದ್ದ ಆಗಂತುಕನಿಂದ ಪಾರು ಮಾಡಿದ ಸುದ್ದಿ ಬಂದಿದೆ.

ಆಕೆ 33 ವರ್ಷದ ಮಹಿಳೆ. ಗಂಡ ಇತ್ತೀಚೆಗೆ ತೀರಿಕೊಂಡಿದ್ದರಿಂದ ಏಳು ವರ್ಷದ ಪುತ್ರಿಯ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಎರಡು ದಿನಗಳ ಹಿಂದೆ 25 ವರ್ಷದ ಯುವಕನೊಬ್ಬ ತನ್ನ ಅಂಗಿ ತೆಗೆದು ಬರೀಯ ಚಡ್ಡಿಯಲ್ಲಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದ. ರಾತ್ರಿ ವೇಳೆ, ಕಿಟಕಿ ಹಾರಿ ಕಳ್ಳದಾರಿಯಿಂದ ಮನೆಯ ಒಳಗೆ ಬಂದಿದ್ದ. ಆದರೆ, ಯುವಕ ಕಳ್ಳದಾರಿಯಿಂದ ಎಂಟ್ರಿ ಕೊಟ್ಟಿದ್ದು ಮನೆ ಒಳಗಿದ್ದ ನಾಯಿಗೆ ಗೊತ್ತಾಗಿದೆ. ಕೂಡಲೇ ನಾಯಿ ಬೌ ಬೌ ಎಂದಿದ್ದು, ಮಹಿಳೆಯನ್ನು ಎಚ್ಚರಿಸಿದೆ.

ಮಹಿಳೆ ಕೂಡಲೇ ಪೊಲೀಸರಿಗೆ ಫೋನಾಯಿಸಿ, ದೂರು ನೀಡಿದ್ದಾಳೆ. ಅಷ್ಟೊತ್ತಿಗೆ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೆ, ಪೊಲೀಸರು ಆಗಮಿಸಿ ಅಲ್ಲಿನ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು 25 ವರ್ಷದ ಸಾದಾರ್ ಆಲಂ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪುರುಷರಿಲ್ಲದ ವಿಚಾರ ತಿಳಿದಿದ್ದ ಆಲಂ, ಮಹಿಳೆಯ ಬೆನ್ನು ಬಿದ್ದಿದ್ದ. ಬೆನ್ನ ಹಿಂದೆ ತಿರುಗಾಡುತ್ತಾ ಆಸೆ ತೀರಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದ. ಆದರೆ, ಮಹಿಳೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಮಹಿಳೆಯ ಮನೆಗೆ ನುಗ್ಗಿ ರಿವೇಂಜ್ ತೀರಿಸಿಕೊಳ್ಳಲು ಕಳ್ಳದಾರಿಯಲ್ಲಿ ಎಂಟ್ರಿ ಕೊಟ್ಟಿದ್ದ. ಆದರೆ, ಮಹಿಳೆಯ ನಂಬಿಕಸ್ಥ ನಾಯಿ ಕಳ್ಳನ ಬಗ್ಗೆ ಎಚ್ಚರಿಸಿ, ಆರೋಪಿಯನ್ನು ಜೈಲು ಕಂಬಿ ಎಣಿಸುವಂತೆ ಮಾಡಿದೆ. ಅಂದಹಾಗೆ, ಈ ಘಟನೆ ನಡೆದಿರೋದು ಮುಂಬೈನ ಪೊವಾಯಿ ಏರಿಯಾದಲ್ಲಿ.