ಮತ್ತೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರಲಿದ್ದಾರೆಯೇ ರಾಹುಲ್ ? ಸೋನಿಯಾ ಗಾಂಧಿ ಮುಂದೆ ಪಕ್ಷದ ಸಂಸದರಿಂದಲೇ ಒತ್ತಾಯ

30-07-20 03:36 pm       Special Correspondant   ದೇಶ - ವಿದೇಶ

ಯುವರಾಜ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಲು ಪಕ್ಷದ ಸಂಸದರಿಂದಲೇ ಒತ್ತಡ ಕೇಳಿಬಂದಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಮ್ಮಿಕೊಂಡ ವರ್ಚುವಲ್ ಮೀಟ್ ನಲ್ಲಿ ಪಕ್ಷದ ಸಂಸದರು ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ ಹುದ್ದೆಗೆ ಏರಬೇಕು ಎಂದು ಒತ್ತಾಯಿಸಿದ ಬೆಳವಣಿಗೆ ನಡೆದಿದೆ.

ನವದೆಹಲಿ, ಜುಲೈ 30: ಯುವರಾಜ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಲು ಪಕ್ಷದ ಸಂಸದರಿಂದಲೇ ಒತ್ತಡ ಕೇಳಿಬಂದಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಮ್ಮಿಕೊಂಡ ವರ್ಚುವಲ್ ಮೀಟ್ ನಲ್ಲಿ ಪಕ್ಷದ ಸಂಸದರು ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ ಹುದ್ದೆಗೆ ಏರಬೇಕು ಎಂದು ಒತ್ತಾಯಿಸಿದ ಬೆಳವಣಿಗೆ ನಡೆದಿದೆ.

ದೇಶದ ಸದ್ಯದ ರಾಜಕೀಯ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಸೋನಿಯಾ ಗಾಧಿ ಪಕ್ಷದ ಸಂಸದರು ಮತ್ತು ಪ್ರಮುಖರ ಜೊತೆ ವರ್ಚುವಲ್ ಮೀಟ್ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ರಾಜ್ಯಸಭಾ ಸದಸ್ಯರೂ ಆಗಿರುವ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ಮತ್ತೆ ಪಕ್ಷದ ಅಧ್ಯಕ್ಷ ಹುದ್ದೆಗೇರುವಂತೆ ಒತ್ತಾಯ ಮಂಡಿಸಿದ್ದಾರೆ. ದಿಗ್ವಿಜಯ್ ಸಿಂಗ್ ಮಾತಿಗೆ ಇತರೇ ಸಂಸದರೂ ದನಿಗೂಡಿಸಿದ್ದಾರೆ. ರಾಜೀವ್ ಸಾತವ್, ಶಕ್ತಿಸಿನ್ಹ ಗೋಹಿಲ್, ನೀರಜ್ ಡಾಂಗೆ ಸೇರಿದಂತೆ ಹಲವು ಸಂಸದರು ರಾಹುಲ್ ಮತ್ತೆ ಪದವಿಗೇರುವಂತೆ ಒತ್ತಾಯಿಸಿದ್ದಾರೆ.

ರಾಜ್ಯಸಭಾ ಸದಸ್ಯ ವೇಣುಗೋಪಾಲ್ ಕೂಡ ಇದೇ ರೀತಿಯ ಒತ್ತಾಯ ಮಾಡಿದ್ದು, ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಜನರ ಅಭಿಪ್ರಾಯವನ್ನು ಎತ್ತಿಹಿಡಿದಿದೆ. ಆದರೆ ರಾಹುಲ್ ಮತ್ತೆ ಅಧ್ಯಕ್ಷರಾಗಬೇಕು ಎನ್ನುವ ನೆಲೆಯಲ್ಲಿ ಪಕ್ಷದ ಸಂಸದರಿಂದ ಆಗ್ರಹ ಕೇಳಿಬಂದಿದೆ. ಜುಲೈ 11ರಂದು ರಾಹುಲ್ ಗಾಂಧಿ ಎದುರಲ್ಲಿಯೇ ಲೋಕಸಭಾ ಸದಸ್ಯರಾದ ಮಾಣಿಕ್ಕಂ ಠಾಗೋರ್, ಗೌರವ್ ಗೊಗೋಯಿ ಮತ್ತಿತರರ ಸಂಸದರೂ ಇದೇ ರೀತಿಯ ಒತ್ತಾಯ ಮಾಡಿದ್ದರು. ರಾಹುಲ್ ಮಾತ್ರ ಈ ವಿಚಾರದಲ್ಲಿ ಮೌನವಾಗೇ ಇದ್ದರು ಎಂದು ಸಭೆಯಲ್ಲಿ ಸೋನಿಯಾ ಗಾಂಧಿ ಗಮನಕ್ಕೆ ತಂದಿದ್ದಾರೆ.

ಅಂದಹಾಗೆ, ಇದೇ ಆಗಸ್ಟ್ 10ಕ್ಕೆ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಲಿದ್ದಾರೆ. ಇದಕ್ಕೂ ಮುನ್ನ ಸೋನಿಯಾ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆಯೇ ಅಥವಾ ಬೇರೊಬ್ಬರನ್ನು ಆಯ್ಕೆ ಮಾಡಲಿದ್ದಾರೆಯೇ ಎನ್ನುವುದು ಖಚಿತವಾಗಲಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಬೇಕೆಂದು ಒತ್ತಾಯ ಕೇಳಿಬಂದಿದ್ದು ಮತ್ತೆ ಯುವರಾಜ ಪಟ್ಟ ಅಲಂಕರಿಸಲಿದ್ದಾರೆಯೇ ಎನ್ನುವ ಕುತೂಹಲ ಉಂಟಾಗಿದೆ. 2019ರ ಲೋಕಸಭೆ ಚುನಾವಣೆ ಸೋಲಿನ ನಂತರ ರಾಹುಲ್ ಪಕ್ಷಾಧ್ಯಕ್ಷ ಹುದ್ದೆ ತ್ಯಜಿಸಿದ್ದರು.