ಅರ್ನಾಬ್ ಬಂಧನ ; ಮಹಾರಾಷ್ಟ್ರ ಸರಕಾರದ ನಡೆ ತುರ್ತುಸ್ಥಿತಿ ನೆನಪಿಸಿದೆ

04-11-20 01:32 pm       Headline Karnataka News Network   ದೇಶ - ವಿದೇಶ

ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವ ಮಹಾರಾಷ್ಟ್ರ ಸರಕಾರದ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಖಂಡಿಸಿದ್ದಾರೆ.

ಮುಂಬೈ, ನವೆಂಬರ್ 04: ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವ ಮಹಾರಾಷ್ಟ್ರ ಸರಕಾರದ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಖಂಡಿಸಿದ್ದಾರೆ.

ಎರಡು ವರ್ಷಗಳ ಹಿಂದಿನ ಪ್ರಕರಣದಲ್ಲಿ ಈಗ ಬಂಧನ ಕ್ರಮ ಜರುಗಿಸುತ್ತಿರುವುದು ಸೇಡಿನ ಕ್ರಮ. ರಾಜ್ಯಾಧಿಕಾರದ ದುರುಪಯೋಗ ಮತ್ತು ಪ್ರಜಾಪ್ರಭುತ್ವದ ಅಣಕ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಈ ರೀತಿಯ ನಡೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನವನ್ನು ವಿರೋಧಿಸಲೇಬೇಕು ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್, ಸ್ಮೃತಿ ಇರಾನಿ ಕೂಡ ಗೋಸ್ವಾಮಿ ಬಂಧನವನ್ನು ಖಂಡಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಸರಕಾರದ ನಾಚಿಕೇಗೇಡಿನ ನಡೆ ಎಂದು ಹೇಳಿದ್ದಾರೆ.

ಎರಡು ವರ್ಷಗಳ ಹಿಂದಿನ ಪ್ರಕರಣ ಇದಾಗಿದ್ದು, 2018ರ ಮೇ ತಿಂಗಳಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯ್ಕ್ ಮತ್ತು ಅವರ ತಾಯಿ ಕುಮುದ್ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವುದಕ್ಕೂ ಮುನ್ನ ಅನ್ವಯ್ ನಾಯ್ಕ್ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನಗೆ ಅರ್ನಾಬ್ ಗೋಸ್ವಾಮಿ ಸೇರಿದಂತೆ ಮೂವರು 5.40 ಕೋಟಿ ರೂಪಾಯಿ ಕೊಡಲು ಬಾಕಿಯಿದೆ. ಫೈನಾನ್ಸ್ ಸಾಲ ತಗೊಂಡಿದ್ದ ಹಣವನ್ನು ಕೊಡದೆ ಸತಾಯಿಸುತ್ತಿದ್ದಾರೆಂದು ಉಲ್ಲೇಖಿಸಿದ್ದರು. ಆದರೆ, ಪ್ರಕರಣ ತನಿಖೆ ನಡೆಯದೆ ಬಾಕಿ ಉಳಿದಿತ್ತು.

ಈಗ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ, ಮಹಾರಾಷ್ಟ್ರ ಸರಕಾರವನ್ನೇ ಆರೋಪಿಯಂತೆ ಬಿಂಬಿಸಿ ಸುದ್ದಿ ಮಾಡಿದ್ದು ಅದರ ಮುಖಂಡರನ್ನು ಕೆರಳಿಸಿತ್ತು. ಇದೇ ಸಿಟ್ಟಿನಲ್ಲಿ ಈಗ ಅರ್ನಾಬ್ ಅವರನ್ನು ಹಳೆಯ ಪ್ರಕರಣದಲ್ಲಿ ಬಂಧಿಸಿದೆ ಎನ್ನಲಾಗುತ್ತಿದೆ. 

Bjp central ministers slammed the Maharashtra government and Mumbai Police for assaulting Arnab Goswami, calls it 'shameful'.