ಕಾಲೇಜು ಆರಂಭಕ್ಕೆ ರೆಡಿ ; ವ್ಯವಸ್ಥೆ ಹೀಗೇ ಇರಬೇಕೆಂದು ಯುಜಿಸಿ ಸೂಚನೆ

06-11-20 01:13 pm       Headline Karnataka News Network   ದೇಶ - ವಿದೇಶ

ಕಾಲೇಜು ಆರಂಭಿಸಲು ಹಲವು ರಾಜ್ಯಗಳು ನಿರ್ಧರಿಸಿದ್ದು ಕಾಲೇಜಿನಲ್ಲಿ ಯಾವ ರೀತಿ ವ್ಯವಸ್ಥೆ ಮಾಡಬೇಕೆಂಬ ನೆಲೆಯಲ್ಲಿ ಯುಜಿಸಿ ಸೂಚನೆ ನೀಡಿದೆ.

ನವದೆಹಲಿ, ನವೆಂಬರ್ 06: ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸಲು ಹಲವು ರಾಜ್ಯಗಳು ನಿರ್ಧರಿಸಿದ್ದು ಈ ನಡುವೆ ಕಾಲೇಜಿನಲ್ಲಿ ಯಾವ ರೀತಿ ವ್ಯವಸ್ಥೆ ಮಾಡಬೇಕೆಂಬ ನೆಲೆಯಲ್ಲಿ ಯುಜಿಸಿ ಮಾರ್ಗದರ್ಶಿ ಸೂತ್ರಗಳನ್ನು ಮುಂದಿಟ್ಟಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಯುಜಿಸಿ ಬಿಡುಗಡೆ ಮಾಡಿರುವ ಮಾರ್ಗದರ್ಶಿಗಳನ್ನು ಟ್ವೀಟ್ ಮಾಡಿದ್ದಾರೆ. ಆರು ದಿನಗಳಲ್ಲಿ ಕಾಲೇಜು ಮಾಡುವುದಿದ್ದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕ್ಲಾಸ್ ರೂಂ ವ್ಯವಸ್ಥೆ ಮಾಡಬೇಕು. ಶಿಫ್ಟ್ ಪ್ರಕಾರ ಅಥವಾ 50 ಶೇಕಡಾ ಹಾಜರಾತಿ ಮೂಲಕ ಕಾಲೇಜು ನಡೆಸುವಂತೆ ಯುಜಿಸಿ ಸೂಚನೆ ನೀಡಿದೆ.

ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಕಾಲೇಜು ಆರಂಭದ ದಿನಾಂಕದ ಬಗ್ಗೆ ಆಯಾ ಸರಕಾರಗಳೇ ನಿರ್ಧರಿಸಬೇಕು. ಜೊತೆಗೆ, ಶಿಕ್ಷಣ ಸಂಸ್ಥೆಗಳು ಕಾಲೇಜು ಆರಂಭಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ, ವಿದೇಶದಿಂದ ಆಗಮಿಸುವ ವಿದ್ಯಾರ್ಥಿಗಳಿಗೂ ಯಾವೆಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು ಅವನ್ನು ಪೂರೈಸಿಕೊಂಡು ಅಡ್ಮಿಶನ್ ಮಾಡಿಕೊಳ್ಳುವಂತೆ ಯುಜಿಸಿ ಹೇಳಿದೆ. ಕೇಂದ್ರ ಸರಕಾರ ಅಕ್ಟೋಬರ್ 15ರ ಬಳಿಕ ಶಾಲೆ ಮತ್ತು ಕಾಲೇಜು ಆರಂಭಿಸಲು ಅವಕಾಶ ನೀಡಿತ್ತು. ಆದರೆ, ಆಯಾ ರಾಜ್ಯಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಲಾಗಿತ್ತು.

ಯುಜಿಸಿ ಮಾರ್ಗಸೂಚಿ ಪ್ರಕಾರ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜೊತೆಗೆ, ಆರು ಅಡಿ ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ಬಳಕೆಗೆ ಅನುವಾಗುವಂತೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಕೆಮ್ಮು, ನೆಗಡಿ ಇದ್ದವರು ಟವೆಲ್ ಬಳಸಬೇಕು. ಅಥವಾ ಟಿಶ್ಯು ಪೇಪರ್ ಬಳಸಿದರೆ ಅದನ್ನು ಸೂಕ್ತವಾಗಿ ಡಿಸ್ಪೋಸ್ ಮಾಡಲು ವ್ಯವಸ್ಥೆ ಮಾಡಬೇಕು. ಅಲ್ಲಲ್ಲಿ ಉಗಿಯುವುದನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

Reopening of colleges and universities should start with libraries and laboratories, research scholars, science and technology postgraduates, and final year students, according to the University Grants Commission.