Modi, Mohammad Shami, Wrold Cup Cricket: ವಿಶ್ವಕಪ್ ಸೋಲು ; ಮೊಹಮ್ಮದ್‌ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದ ಮೋದಿ, ಡ್ರೆಸ್ಸಿಂಗ್‌ ರೂಮ್ ನಲ್ಲಿ ಆಟಗಾರರನ್ನು ತಬ್ಬಿಕೊಂಡು ಧೈರ್ಯ ತುಂಬಿಸಿ ಮನೆಗೆ ಬನ್ನಿ ಎಂದ ಪ್ರಧಾನಿ 

21-11-23 12:28 pm       HK News Desk   ದೇಶ - ವಿದೇಶ

ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲು ಕೋಟ್ಯಂತರ ಅಭಿಮಾನಿಗಳ ಹೃದಯ ಚೂರಾಗುವಂತೆ ಮಾಡಿತ್ತು. ಆಟಗಾರರ ಹೃದಯವನ್ನು ಹಿಂಡಿತ್ತು.

ಅಹಮದಾಬಾದ್​, ನ 21: ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲು ಕೋಟ್ಯಂತರ ಅಭಿಮಾನಿಗಳ ಹೃದಯ ಚೂರಾಗುವಂತೆ ಮಾಡಿತ್ತು. ಆಟಗಾರರ ಹೃದಯವನ್ನು ಹಿಂಡಿತ್ತು. ತಮ್ಮ ನೋವನ್ನು ಹೇಳಿಕೊಳ್ಳಲಾಗದೆ, ಸಹಿಸಲೂ ಆಗದೆ ಆಟಗಾರರು ಡ್ರೆಸ್ಸಿಂಗ್‌ ಕೋಣೆಯೊಳಗೆ ತಳಮಳಿಸಿದ್ದರು.

ಸೋತ ಭಾರತ ತಂಡದ ಪರಿಸ್ಥಿತಿ ಹೇಗಿರಬಹುದು ಎಂಬ ಅರಿವಿದ್ದೇ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್‌ ಕೊಠಡಿಯನ್ನು ಪ್ರವೇಶಿಸಿ ಉದ್ವೇಗಕ್ಕೊಳಗಾಗಿದ್ದ ವೇಗಿ ಮೊಹಮ್ಮದ್‌ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದ್ದರು. ಅಲ್ಲದೆ ಎಲ್ಲ ಆಟಗಾರರನ್ನು ತಬ್ಬಿಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದರ ಫೋಟೊಗಳು ಸೋಮವಾರ ವೈರಲ್​ ಆಗಿತ್ತು. ಇದೀಗ ಮೋದಿ ಅವರು ಡ್ರಸ್ಸಿಂಗ್​ ರೂಮ್​ನಲ್ಲಿ ಆಟಗಾರರನ್ನು ಸಂತೈಸುವ ವಿಡಿಯೊವನ್ನು ಮೋದಿ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಆಹ್ವಾನ ;

ಪ್ರಧಾನಿ ಮೋದಿ ಅವರು ಡ್ರೆಸ್ಸಿಂಗ್​ ರೋಮ್​ನಲ್ಲಿ ಎಲ್ಲ ಆಟಗಾರರಿಗೂ, ಕೋಚ್​ ದ್ರಾವಿಡ್​ ಅವರಿಗೂ ಸಮಾಧಾನ ಮಾಡುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಗೃಹ ಸಚಿವ ಅಮಿತ್​ ಶಾ ಕೂಡ ಜತೆಗಿದ್ದರು. ಎಲ್ಲ ಆಟಗಾರರನ್ನು ಕೂಡ ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂತೆ ವಿಶೇಷ ಆಹ್ವಾನ ನೀಡಿದ್ದಾರೆ.

ಮೋದಿ ಅವರು ಧೈರ್ಯ ತುಂಬಿದ ಬಳಿಕ ಟ್ವೀಟ್‌ ಮಾಡಿದ್ದ ಶಮಿ, ‘ತಂಡದ ಬೆಂಬಲಕ್ಕೆ ನಿಂತಿರುವ ಎಲ್ಲ ಭಾರತೀಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸಿ ನಮಗೆ ಸಮಾಧಾನ ಹೇಳಿದ ಪ್ರಧಾನಿ ಮೋದಿ ಎಲ್ಲರ ಉತ್ಸಾಹವನ್ನು ಬಡಿದೆಬ್ಬಿಸಿದರು. ನಾವು ಮತ್ತೆ ತಿರುಗಿ ಬೀಳುತ್ತೇವೆ” ಎಂದು ಹೇಳಿದ್ದರು.

ರವೀಂದ್ರ ಜಡೇಜಾ ಕೂಡ ಕೃತಜ್ಞತೆ ಅರ್ಪಿಸಿ, ನಮ್ಮೆಲ್ಲರ ಹೃದಯಗಳು ಒಡೆದುಹೋಗಿವೆ. ಆದರೆ ಜನರ ಬೆಂಬಲ ಮತ್ತು ಪ್ರಧಾನಿ ಮೋದಿ ಡ್ರೆಸ್ಸಿಂಗ್‌ ರೂಮ್​ಗೆ ಆಗಮಿಸಿ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದ್ದು ಸ್ಫೂರ್ತಿದಾಯಕವಾಗಿತ್ತು ಎಂದು ಹೇಳಿಕೊಂಡಿದ್ದರು.

An emotional Mohammad Shami hugged Prime Minister Modi when he met him in the dressing room. The star bowler was the highest wicket-ticket in the tournament.