Arvind Kejriwal, Delhi liquor scam: ಸಿಎಂ ಅರವಿಂದ್‌ ಕೇಜ್ರಿವಾಲ್‌ ಅಬಕಾರಿ ಹಗರಣದ ಪ್ರಮುಖ ಸಂಚುಕೋರ ಹಾಗೂ ಕಿಂಗ್‌ಪಿನ್‌ ; ಕಂಪೆನಿಯಿಂದ ಬಿಜೆಪಿಗೆ 5 ಕೋಟಿ ರೂ ದೇಣಿಗೆ, ಶಾಕಿಂಗ್ ಡೀಟೇಲ್ಸ್ ಬಿಚ್ಚಿಟ್ಟ ಇಡಿ 

23-03-24 02:34 pm       HK News Desk   ದೇಶ - ವಿದೇಶ

ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರೇ ದಿಲ್ಲಿ ಅಬಕಾರಿ ನೀತಿ ಹಗರಣದ ಪ್ರಮುಖ 'ಸಂಚುಕೋರ ಹಾಗೂ ಕಿಂಗ್‌ಪಿನ್‌' ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಕೋರ್ಟ್‌ನಲ್ಲಿ ಹೇಳಿದೆ.

ಹೊಸದಿಲ್ಲಿ, ಮಾ.23: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರೇ ದಿಲ್ಲಿ ಅಬಕಾರಿ ನೀತಿ ಹಗರಣದ ಪ್ರಮುಖ 'ಸಂಚುಕೋರ ಹಾಗೂ ಕಿಂಗ್‌ಪಿನ್‌' ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಕೋರ್ಟ್‌ನಲ್ಲಿ ಹೇಳಿದೆ.

ಹೈಡ್ರಾಮಾದ ಬಳಿಕ ಗುರುವಾರ ರಾತ್ರಿ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್‌ ಅವರನ್ನು ಇ.ಡಿ ತಂಡವು ಶುಕ್ರವಾರ ರೋಸ್‌ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಕೇಜ್ರಿವಾಲ್‌ ಅವರನ್ನು 7 ದಿನಗಳ ಇ.ಡಿ ಕಸ್ಟಡಿಗೆ ಒಪ್ಪಿಸಿದೆ. ಆದರೆ ವಿಚಾರಣೆ ವೇಳೆ ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎ.ಎಸ್‌.ವಿ. ರಾಜು ಅವರು ದಿಲ್ಲಿ ಸಿಎಂ ವಿರುದ್ಧ ಏಳು ಗುರುತರ ಆರೋಪಗಳನ್ನು ಹೊರಿಸಿದರು.

1. ಸಂಚುಕೋರ, ಕಿಂಗ್‌ಪಿನ್‌

ಕೇಜ್ರಿವಾಲ್‌ ಅವರೇ 2021-22ರ ಅಬಕಾರಿ ನೀತಿಯ ಹಗರಣದ ಪ್ರಮುಖ ಸಂಚುಕೋರ ಮತ್ತು ಕಿಂಗ್‌ಪಿನ್‌. ಇಲ್ಲಿ 600 ಕೋಟಿ ರೂ. ಮೌಲ್ಯದ ಅಕ್ರಮಗಳು ನಡೆದಿವೆ.

2. ನೀತಿ ರೂಪಿಸುವಲ್ಲಿ ನೇರ ಭಾಗಿ

ದಿಲ್ಲಿಅಬಕಾರಿ ನೀತಿ ರೂಪಿಸುವಲ್ಲಿ ಕೇಜ್ರಿವಾಲ್‌ ನೇರವಾಗಿ ಭಾಗಿಯಾಗಿದ್ದರು. ಮದ್ಯ ವ್ಯಾಪಾರಿಗಳ ಲಾಬಿಗೆ ಅನುಸಾರವಾಗಿ ನೀತಿ ರೂಪಿಸಿ ಭಾರಿ ಪ್ರಮಾಣದಲ್ಲಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ.

3. ಅಪರಾಧ ವ್ಯವಹಾರಗಳಲ್ಲಿ ನೇರ ಭಾಗಿ

ಕೇಜ್ರಿವಾಲ್‌ ಅವರು ಅಪರಾಧ ಕೃತ್ಯಗಳಲ್ಲಿನೇರವಾಗಿ ಭಾಗಿಯಾಗಿದ್ದು, ಕೇವಲ 100 ಕೋಟಿ ರೂ. ಅಲ್ಲ, 600 ಕೋಟಿ ರೂ. ಮೊತ್ತದ ಅಕ್ರಮ ವಹಿವಾಟು ನಡೆದಿದೆ.

4. ಗೋವಾ, ಪಂಜಾಬ್‌ ಚುನಾವಣೆಗೆ ಬಳಕೆ

ಅಪರಾಧ ವಹಿವಾಟಿನಿಂದ ಹವಾಲಾ ದಂಧೆ ಮೂಲಕ 45 ಕೋಟಿ ರೂ. ಅಕ್ರಮ ನಡೆದಿದೆ. ಕಿಕ್‌ಬ್ಯಾಕ್‌ ಮೂಲಕ ಬಂದ ಸುಮಾರು 128 ಕೋಟಿ ರೂ. ಹಣವನ್ನು ಆಪ್‌ ಗೋವಾ, ಪಂಜಾಬ್‌ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿದೆ. ಈ ಬಗ್ಗೆ ಇ.ಡಿ ಹಲವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

5. ಸೌತ್‌ ಗ್ರೂಪ್‌ನಿಂದ ಕಿಕ್‌ಬ್ಯಾಕ್‌ಗೆ ಬೇಡಿಕೆ

ಕೇಜ್ರಿವಾಲ್‌ ಅವರು ಅಬಕಾರಿ ನೀತಿಯಲ್ಲಿ ಮದ್ಯ ತಯಾರಿಕಾ ಕಂಪನಿಗಳ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ 'ಸೌತ್‌ ಗ್ರೂಪ್‌'ನಿಂದ ಕಿಕ್‌ಬ್ಯಾಕ್‌ಗೆ ಬೇಡಿಕೆ ಇಟ್ಟಿದ್ದರು.

6. ಕೇಜ್ರಿವಾಲ್‌ ಸಹವರ್ತಿ ಮಧ್ಯವರ್ತಿಯಾಗಿ ಕೆಲಸ

ಸೌತ್‌ ಗ್ರೂಪ್‌ ಮತ್ತು ಆಪ್‌ ನಡುವೆ ಕೇಜ್ರಿವಾಲ್‌ ಅವರ ಸಹವರ್ತಿ ವಿಜಯ್‌ ನಾಯರ್‌ ಅವರು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ಕೇಜ್ರಿವಾಲ್‌ ಅವರ ನಿವಾಸ ಪಕ್ಕದಲ್ಲಿಯೇ ನಾಯರ್‌ ಅವರ ನಿವಾಸವಿದೆ.

7. ಇ.ಡಿ ಅಧಿಕಾರಿಗಳ ಮೇಲೆ ನಿಗಾ

ಕೇಜ್ರಿವಾಲ್‌ ಅವರು ಈ ಅಕ್ರಮ ವಹಿವಾಟುಗಳ ಕುರಿತು ಅನುಮಾನ ಬಾರದಿರಲು ಅಧಿಕಾರ ಬಳಸಿಕೊಂಡು ಇ.ಡಿ ಅಧಿಕಾರಿಗಳ ಮೇಲೆ ನಿಗಾ ಇರಿಸಿದ್ದರು.

ಮಾಫಿ ಸಾಕ್ಷಿಯಾದ ಉದ್ಯಮಿಯಿಂದ ಬಿಜೆಪಿಗೆ 5 ಕೋಟಿ ರೂ. ದೇಣಿಗೆ!

ಹೈದರಾಬಾದ್‌ ಮೂಲದ ಉದ್ಯಮಿ ಪಿ. ಶರತ್‌ ಚಂದ್ರ ರೆಡ್ಡಿ ಅವರ ಅರಬಿಂದೊ ಫಾರ್ಮಾ ಕಂಪನಿಯು ದಿಲ್ಲಿ ಲಿಕ್ಕರ್‌ ಹಗರಣದಲ್ಲಿ ನಂಟು ಹೊಂದಿರುವ ಬಗ್ಗೆ ಸುದ್ದಿ ಹರಡಿತ್ತು. 2023ರ ಜೂನ್‌ನಲ್ಲಿ ಹಗರಣದ ಮಾಫಿ ಸಾಕ್ಷಿಯಾಗುವುದಾಗಿ ಶರತ್‌ ರೆಡ್ಡಿ ಒಪ್ಪಿಗೆ ನೀಡಿದರು. ಅದಕ್ಕೂ ಮುನ್ನ ಮೇನಲ್ಲಿ ವೈದ್ಯಕೀಯ ಚಿಕಿತ್ಸೆ ಹಿನ್ನೆಲೆಯಲ್ಲಿ ಶರತ್‌ ರೆಡ್ಡಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು ನೀಡಿತು. ಇದಕ್ಕೆ ಇ.ಡಿ ಅಧಿಕಾರಿಗಳಿಂದ ಆಕ್ಷೇಪ ವ್ಯಕ್ತವಾಗಲಿಲ್ಲ ಎನ್ನುವುದು ಗಮನಾರ್ಹ. ಎರಡು ತಿಂಗಳ ಬಳಿಕ ಅರಬಿಂದೊ ಫಾರ್ಮಾ ಕಂಪನಿಯು ಬಿಜೆಪಿಗೆ 5 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್‌ ದೇಣಿಗೆ ನೀಡಿದೆ. ಇದಕ್ಕೂ ಮುನ್ನ, ಕಂಪನಿಯು ಬಿಆರ್‌ಎಸ್‌, ಟಿಡಿಪಿಗೂ ಕೂಡ ದೇಣಿಗೆ ನೀಡಿರುವುದು ಬಯಲಾಗಿದೆ.

Delhi chief minister Arvind Kejriwal was the kingpin and key conspirator of the Delhi liquor policy scam, Enforcement Directorate told the Rouse Avenue court on Friday. Kejriwal was arrested by the ED late on Thursday night and produced before the court today.