Sasikanth Senthil VS Annamalai; ಕೊಯಮತ್ತೂರಿಗೆ ಅಣ್ಣಾಮಲೈ, ತಿರುವಳ್ಳೂರಿನಲ್ಲಿ ಸಸಿಕಾಂತ್ ಸೆಂಥಿಲ್ ; ಕಾಂಗ್ರೆಸ್ ಭದ್ರಕೋಟೆಯಲ್ಲಿ ಸೆಂಥಿಲ್ ಗೆಲುವು ಸುಲಭ, ಮ್ಯಾಜಿಕ್ ಸೃಷ್ಟಿಸುತ್ತಾರೆಯೇ ಯೂತ್ ಐಕಾನ್ ಅಣ್ಣಾಮಲೈ? 

24-03-24 06:55 pm       Giridhar   ದೇಶ - ವಿದೇಶ

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮತ್ತು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮಿಳುನಾಡಿನಲ್ಲಿ ಒಂದೇ ಬಾರಿಗೆ ಲೋಕಸಭೆ ಕಣಕ್ಕಿಳಿದಿದ್ದಾರೆ. ಇವರಿಬ್ಬರೂ 2019ರ ಒಂದೇ ಅವಧಿಯಲ್ಲಿ ಸರ್ಕಾರಿ ಸೇವೆ ಬಿಟ್ಟು ರಾಜಕೀಯ ಸೇರ್ಪಡೆಯಾಗಿದ್ದರು. ಇದೀಗ ಅಣ್ಣಾಮಲೈ ತಮಿಳುನಾಡಿನ ಪ್ರತಿಷ್ಠಿತ ಕ್ಷೇತ್ರ ಕೊಯಮತ್ತೂರು ಮತ್ತು ಸಸಿಕಾಂತ್ ಸೆಂಥಿಲ್ ತಿರುವಳ್ಳೂರು ಮೀಸಲು ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ.

ಬೆಂಗಳೂರು, ಮಾ.24: ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮತ್ತು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮಿಳುನಾಡಿನಲ್ಲಿ ಒಂದೇ ಬಾರಿಗೆ ಲೋಕಸಭೆ ಕಣಕ್ಕಿಳಿದಿದ್ದಾರೆ. ಇವರಿಬ್ಬರೂ 2019ರ ಒಂದೇ ಅವಧಿಯಲ್ಲಿ ಸರ್ಕಾರಿ ಸೇವೆ ಬಿಟ್ಟು ರಾಜಕೀಯ ಸೇರ್ಪಡೆಯಾಗಿದ್ದರು. ಇದೀಗ ಅಣ್ಣಾಮಲೈ ತಮಿಳುನಾಡಿನ ಪ್ರತಿಷ್ಠಿತ ಕ್ಷೇತ್ರ ಕೊಯಮತ್ತೂರು ಮತ್ತು ಸಸಿಕಾಂತ್ ಸೆಂಥಿಲ್ ತಿರುವಳ್ಳೂರು ಮೀಸಲು ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ.

ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2019ರಲ್ಲಿ ತನ್ನ ಹುದ್ದೆಗೆ ರಾಜಿನಾಮೆ ನೀಡಿ 2020ರಲ್ಲಿ ಬಿಜೆಪಿ ಸೇರಿದ್ದರು. ಪ್ರಖರ ವಾಕ್ಚಾತುರ್ಯ, ಬದ್ಧತೆಯ ರಾಜಕಾರಣದಿಂದ ಬಹುಬೇಗನೆ ಯುವಕರನ್ನು ಸೆಳೆದಿದ್ದ ಅಣ್ಣಾಮಲೈ ಅವರನ್ನು 2020ರಲ್ಲಿ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. 37 ವರ್ಷದ ಅಣ್ಣಾಮಲೈ ತಮಿಳುನಾಡಿನ ಅತ್ಯಂತ ಕಿರಿಯ ಬಿಜೆಪಿ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಮಿಳುನಾಡು ಪಾಲಿಗೆ ಎರಡನೇ ಅತಿದೊಡ್ಡ ನಗರ ಎಂದೆನಿಸಿರುವ ಕೊಯಮತ್ತೂರು ಪ್ರತಿಷ್ಠೆಯ ಕ್ಷೇತ್ರವೂ ಹೌದು. 2009ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಕೊಯಮತ್ತೂರು ಲೋಕಸಭೆ ಕ್ಷೇತ್ರದಲ್ಲಿ ಆರು ಅಸೆಂಬ್ಲಿ ಕ್ಷೇತ್ರಗಳನ್ನು ಹೊಂದಿದೆ. ಹಿಂದೆಲ್ಲಾ ಸಿಪಿಐ ಮತ್ತು ಸಿಪಿಐ ನಾಯಕರು ಪ್ರಬಲವಾಗಿದ್ದುದು ಮತ್ತು ನಿರಂತರವಾಗಿ ಎಡಪಂಥೀಯರೇ ಈ ಕ್ಷೇತ್ರವನ್ನು ಲೋಕಸಭೆಯಲ್ಲಿ ಗೆದ್ದುಕೊಂಡು ಬಂದಿದ್ದರು. ಆದರೆ 1998 ಮತ್ತು 99ರಲ್ಲಿ ನಡೆದ ಚುನಾವಣೆಯಲ್ಲಿ ಎರಡು ಬಾರಿ ದಿಢೀರ್ ಎನ್ನುವಂತೆ ಬಿಜೆಪಿ ಗೆದ್ದಿದ್ದು ಇಲ್ಲಿನ ಇತಿಹಾಸ. ಹಾಲಿ ಆರು ಕ್ಷೇತ್ರಗಳಲ್ಲಿ ಐದರಲ್ಲಿ ಎಐಎಡಿಎಂಕೆ ಮತ್ತು ಒಂದರಲ್ಲಿ ಬಿಜೆಪಿ ಸ್ಥಾನ ಹೊಂದಿದೆ.

ಎರಡು ಬಾರಿ ಬಿಜೆಪಿ ಗೆದ್ದ ಇತಿಹಾಸ  

ಎಡಪಂಥೀಯರ ಜಾಗದಲ್ಲಿ ತಮಿಳುನಾಡಿನಾದ್ಯಂತ ಈಗ ಡಿಎಂಕೆ ಮತ್ತು ಎಐಎಡಿಎಂಕೆ ಅಧಿಪತ್ಯ ಸ್ಥಾಪಿಸಿದ್ದು, ಈ ನೆಲೆಯಲ್ಲಿ ನೋಡಿದರೆ ಕೊಯಮತ್ತೂರು ಕ್ಷೇತ್ರದಲ್ಲೀಗ ಆಡಳಿತಾರೂಢ ಡಿಎಂಕೆಗಿಂತಲೂ ಎಐಎಡಿಎಂಕೆ ಹೆಚ್ಚು ಪ್ರಾಬಲ್ಯ ಹೊಂದಿದೆ ಎನ್ನಬಹುದು. ಆದರೆ 1998 ಮತ್ತು 99ರಲ್ಲಿ ಸತತ ಎರಡು ಬಾರಿ ಈ ಕ್ಷೇತ್ರವನ್ನು ಗೆಲ್ಲಲು ಕಾರಣವಾಗಿದ್ದು 1998ರ ಸರಣಿ ಬಾಂಬ್ ಸ್ಫೋಟ. ಎಲ್.ಕೆ. ಆಡ್ವಾಣಿ ಗುರಿಯಾಗಿಸಿ ಅಲ್ ಉಮ್ಮಾ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಆಡ್ವಾಣಿ ಅಪಾಯದಿಂದ ಪಾರಾದರೂ, 58 ಮಂದಿ ಅಮಾಯಕರು ಪ್ರಾಣ ಕಳಕೊಂಡಿದ್ದರು. ಬಾಂಬ್ ಸ್ಫೋಟ ಕೃತ್ಯವನ್ನು ಮುಂದಿಟ್ಟು ಚುನಾವಣೆ ಎದುರಿಸಿದ ಬಿಜೆಪಿಗೆ ಎರಡು ಬಾರಿ ಜನ ಕೈಹಿಡಿದಿದ್ದರು. ಸಿ.ಪಿ ರಾಧಾಕೃಷ್ಣನ್ ಎರಡು ಬಾರಿ ಬಿಜೆಪಿಯಿಂದ ಸಂಸದರಾಗಿದ್ದರು. 2004ರಲ್ಲಿ ರಾಧಾಕೃಷ್ಣನ್ ಸೋತಿದ್ದರೆ, 2009ರಲ್ಲಿ ಅಭ್ಯರ್ಥಿ ಬದಲಿಸಿ ಬಿಜೆಪಿ ಕೈಸುಟ್ಟುಕೊಂಡಿತ್ತು. ಕೇವಲ 37,809 ಮತ ಗಳಿಸುವಂತಾಗಿತ್ತು. ಮತ್ತೆ 2014ರಲ್ಲಿ ರಾಧಾಕೃಷ್ಣನ್ ಸ್ಪರ್ಧಿಸಿ ಗೆಲುವಿಗಾಗಿ ಪೈಪೋಟಿ ಒಡ್ಡಿದ್ದರು. 2019ರಲ್ಲಿಯೂ ರಾಧಾಕೃಷ್ಣನ್ ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿದ್ದರೂ 1.80 ಲಕ್ಷ ಮತಗಳ ಅಂತರದಿಂದ ಸಿಪಿಐಎಂ ವಿರುದ್ಧ ಸೋಲನುಭವಿಸಿದ್ದರು. ಕಳೆದ ಬಾರಿ ಎಐಎಡಿಎಂಕೆ ಮೈತ್ರಿ ಇದ್ದರೂ, ಬಿಜೆಪಿಗೆ ಗೆಲುವು ದಕ್ಕಿರಲಿಲ್ಲ.

  

1998ರ ಸ್ಫೋಟ ನೆನಪಿಸಿದ ಪ್ರಧಾನಿ ಮೋದಿ

ಇಂಥ ಕ್ಷೇತ್ರದಲ್ಲಿ ಈ ಬಾರಿ ಎಐಎಡಿಎಂಕೆಯಿಂದ ಪಕ್ಷದ ಐಟಿ ವಿಭಾಗದ ಮುಖ್ಯಸ್ಥ ಸಿಂಗೈ ಜಿ. ರಾಮಚಂದ್ರನ್ ಸ್ಪರ್ಧಿಸಿದ್ದಾರೆ. ಡಿಎಂಕೆಯಿಂದ ಮಾಜಿ ಮೇಯರ್ ಗಣಪತಿ ಪಿ. ರಾಜಕುಮಾರ್ ಕಣದಲ್ಲಿದ್ದಾರೆ. ಇವರ ನಡುವೆ ಬಿಜೆಪಿಯಿಂದ ಯುವಕರ ಐಕಾನ್ ಆಗಿರುವ ಅಣ್ಣಾಮಲೈ ಸ್ಪರ್ಧಿಸಿರುವುದು ಕ್ಷೇತ್ರದಲ್ಲಿ ಸಂಚಲನ ಎಬ್ಬಿಸುವ ಲಕ್ಷಣ ತೋರಿಸಿದೆ. ಯಾಕಂದ್ರೆ, ಇತ್ತೀಚೆಗೆ ಕೊಯಮತ್ತೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ 26 ವರ್ಷಗಳ ಹಿಂದಿನ 1998ರ ಸರಣಿ ಬಾಂಬ್ ಸ್ಫೋಟವನ್ನು ನೆನಪಿಸಿ ಮಡಿದಿದ್ದ 58 ಮಂದಿಯ ಸ್ಮಾರಕಕ್ಕೆ ನಮಿಸಿ ಬಂದಿದ್ದರು. ಇದಲ್ಲದೆ, ನಾವೆಂದೂ ಅಂದಿನ ಘಾತುಕ ಕೃತ್ಯವನ್ನು ಮರೆಯಲ್ಲ ಎಂದು ಹೇಳಿ ಹಳೆ ನೆನಪುಗಳನ್ನು ಜನರಲ್ಲಿ ಮತ್ತೆ ಮೂಡಿಸಿದ್ದಾರೆ. ಬಿಜೆಪಿ ಪಾಲಿನ ಮತ್ತೊಂದು ಪ್ಲಸ್ ಏನಂದ್ರೆ, ಅತಿ ಹೆಚ್ಚಿನ ಉತ್ತರ ಭಾರತದ ಕಾರ್ಮಿಕರು ಇರುವುದು. ಕೊಯಮತ್ತೂರಿನ ಜವಳಿ ಉದ್ಯಮದಲ್ಲಿ ಉತ್ತರ ಭಾರತೀಯರು ಹೆಚ್ಚಿದ್ದು, ಬಿಜೆಪಿ ಕೈಹಿಡಿಯುವರೆಂಬ ನಂಬಿಕೆಯಲ್ಲಿ ನಾಯಕರಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷರಾಗಿದ್ದು ಅಣ್ಣಾಮಲೈ ಈಗಾಗಲೇ ಎನ್ ಮನ, ಎನ್ ಮಕ್ಕಳ್ ಹೆಸರಲ್ಲಿ ರಾಜ್ಯದ 234 ಕ್ಷೇತ್ರಗಳಿಗೂ ಪಾದಯಾತ್ರೆ ಕೈಗೊಂಡಿದ್ದು, ಜನರಲ್ಲಿ ಭರವಸೆ ಮೂಡಿಸಿದ್ದಾರೆ.

ತಿರುವಳ್ಳೂರಿನಲ್ಲಿ ಸೆಂಥಿಲ್ ಗೆಲುವು ಸುಲಭ

ಸಸಿಕಾಂತ್ ಸೆಂಥಿಲ್ ಸ್ಪರ್ಧಿಸಿರುವ ತಿರುವಳ್ಳೂರು ಕ್ಷೇತ್ರ ಪೂರ್ತಿಯಾಗಿ ಕಾಂಗ್ರೆಸ್ ಮತ್ತು ಡಿಎಂಕೆ ಹಿಡಿತದಲ್ಲಿರುವ ಕ್ಷೇತ್ರ. ಚೆನ್ನೈ ನಗರದ ಬಳಿಯಲ್ಲೇ ಇರುವ ಈ ಕ್ಷೇತ್ರದಲ್ಲಿ 9 ಅಸೆಂಬ್ಲಿ ಕ್ಷೇತ್ರಗಳಿದ್ದು, ಎಂಟು ಕಡೆ ಡಿಎಂಕೆ ಸದಸ್ಯರಿದ್ದರೆ, ಒಂದು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. 2009 ಮತ್ತು 2014ರಲ್ಲಿ ಎಐಎಡಿಎಂಕೆ ಈ ಲೋಕಸಭೆ ಕ್ಷೇತ್ರವನ್ನು ಗೆದ್ದುಕೊಂಡಿದ್ದರೆ, 2019ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ ಹಾಲಿ ಸಂಸದ ಕೆ. ಜಯಕುಮಾರ್ ಅವರಿದ್ದ ಜಾಗಕ್ಕೆ ಸೆಂಥಿಲ್ ಅದೃಷ್ಟದ ಟಿಕೆಟ್ ಪಡೆದಿದ್ದಾರೆ. 2019ರಲ್ಲಿ ಬಿಜೆಪಿ ಸ್ಪರ್ಧೆ ಮಾಡಿರಲಿಲ್ಲ. ಮೈತ್ರಿ ಪಕ್ಷ ಎಐಎಡಿಎಂಕೆ ಸ್ಪರ್ಧಿಸಿ ಸೋತಿತ್ತು. ಈ ಬಾರಿ ಬಿಜೆಪಿಯಿಂದ ಪೊನ್. ವಿ. ಬಾಲಗಣಪತಿ ಸ್ಪರ್ಧಿಸಿದ್ದಾರೆ. ರಾಜಕೀಯ ಲೆಕ್ಕಾಚಾರ ನೋಡಿದರೆ ಇಲ್ಲಿ ಸಸಿಕಾಂತ್ ಸೆಂಥಿಲ್ ಸುಲಭದಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಈ ಹಿಂದೆ ಶ್ರೀಪೆರಂಬದೂರು ಕ್ಷೇತ್ರದ ಭಾಗವಾಗಿದ್ದ ಈ ಕ್ಷೇತ್ರದಲ್ಲಿ ಎರಡು ಎಸ್ಸಿ ಮೀಸಲು ಅಸೆಂಬ್ಲಿ ಕ್ಷೇತ್ರಗಳಿದ್ದು, ಎಸ್ಸಿ- ಎಸ್ಟಿ ಮತಗಳೇ ನಿರ್ಣಾಯಕ.

"Resigned from the IAS in protest. Trying to stay on the right side of history," says his profile on platform X. That is Sasikanth Senthil, the Congress candidate for Tiruvallur Lok Sabha constituency. Congress released the fourth list of 46 candidates for the upcoming elections on Saturday evening. Sasikanth Senthil's name figured in that list. Meanwhile, a video posted by him on platform X on Saturday has him making a reference to Mandal Commission and how it hurt the RSS like a "burglar stung by a scorpion."