Nota vote, election, Indore, Dakshina Kannada: ಲೋಕಸಭೆಯಲ್ಲಿ ನೋಟಾ ಓಟ ; ಪ್ರಚಾರ ಕಣದಲ್ಲೇ ಕಮಲ ಆಪರೇಶನ್, ಇಂದೋರಲ್ಲಿ ನೋಟಾ ಅಭಿಯಾನಕ್ಕೆ 2.18 ಲಕ್ಷ ಮತ, 11.72 ಲಕ್ಷ ಅಂತರದಲ್ಲಿ ಗೆಲುವಿನ ದಾಖಲೆ, ಕರ್ನಾಟಕದಲ್ಲಿ 2.18 ಲಕ್ಷ ನೋಟಾ, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ! 

07-06-24 04:37 pm       HK News Desk   ದೇಶ - ವಿದೇಶ

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ನೋಟಾ ಪರವಾಗಿ ದೊಡ್ಡ ಸಂಖ್ಯೆಯಲ್ಲಿ ಮತದಾರರು ತಮ್ಮ ಆಯ್ಕೆ ತೋರಿಸಿದ್ದಾರೆ. ದೇಶಾದ್ಯಂತ ನೋಟಾ ಪರ ಎಷ್ಟು ಮತ ಚಲಾವಣೆಯಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ನವದೆಹಲಿ, ಜೂನ್ 7: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ನೋಟಾ ಪರವಾಗಿ ದೊಡ್ಡ ಸಂಖ್ಯೆಯಲ್ಲಿ ಮತದಾರರು ತಮ್ಮ ಆಯ್ಕೆ ತೋರಿಸಿದ್ದಾರೆ. ದೇಶಾದ್ಯಂತ ನೋಟಾ ಪರ ಎಷ್ಟು ಮತ ಚಲಾವಣೆಯಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಒಟ್ಟು 60 ಲಕ್ಷದಷ್ಟು ಜನ ನೋಟಾ ಪರವಾಗಿ ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮಧ್ಯಪ್ರದೇಶದ ಇಂದೋರ್ ಲೋಕಸಭೆ ಕ್ಷೇತ್ರ ಒಂದರಲ್ಲೇ 2,18,674 ಮತಗಳು ನೋಟಾ ಪರವಾಗಿ ಬಿದ್ದಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ, ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನೋಟಾ ಅಭಿಯಾನ ನಡೆಸಿರೋದು.

ಇಂದೋರ್ ಕ್ಷೇತ್ರದಲ್ಲಿ ಚುನಾವಣೆ ಆಗುವುದಕ್ಕೂ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಲ್ಲದೆ, ಬಿಜೆಪಿ ಸೇರ್ಪಡೆಯಾಗಿದ್ದು ಪಕ್ಷದ ಕಾರ್ಯಕರ್ತರನ್ನು ಕೆರಳಿಸಿತ್ತು. ಇದರಿಂದಾಗಿ ಬಿಜೆಪಿ ಪ್ರಾಬಲ್ಯದ ಇಂದೋರ್ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಮತಗಳೆಲ್ಲ ನೋಟಾ ಪರವಾಗಿ ಬಿದ್ದಿವೆ. ಇಡೀ ದೇಶದಲ್ಲಿ ದಾಖಲೆ ಎನ್ನುವಂತೆ ಎರಡು ಲಕ್ಷಕ್ಕೂ ಹೆಚ್ಚು ಜನರು ನೋಟಾ ಪರವಾಗಿ ಮತ ಚಲಾಯಿಸಿದ್ದಾರೆ. ಇದೇ ವೇಳೆ, ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾಣಿ ಅವರು 12,26,751 ಮತಗಳನ್ನು ಬಾಚಿಕೊಂಡಿದ್ದು, 11,75,092 ಮತಗಳ ಭಾರೀ ಅಂತರದಿಂದ ಗೆಲುವು ದಾಖಲಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾ ಪರವಾಗಿ 2,18,674 ಮತ ಚಲಾವಣೆಯಾಗಿದ್ದು ಒಟ್ಟು ಮತಗಳಲ್ಲಿ 16.28 ಶೇಕಡಾ ಬಿದ್ದಿದೆ. ಕಣದಲ್ಲಿದ್ದ ಇತರ 13 ಮಂದಿ ಠೇವಣಿ ಉಳಿಸಿಕೊಳ್ಳುವಷ್ಟೂ ಮತ ಪಡೆದಿಲ್ಲ. ಮೂರನೇ ಸ್ಥಾನ ಪಡೆದ ಬಹುಜನ ಸಮಾಜ ಪಾರ್ಟಿಯ ಸಂಜಯ್ ಸೋಲಂಕಿ 51,659 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾದ ಒಟ್ಟು ಮತಗಳಲ್ಲಿ ಆರನೇ ಒಂದರಷ್ಟು ಮತ ಪಡೆಯದೇ ಇದ್ದಲ್ಲಿ ಅಭ್ಯರ್ಥಿಗಳ ಠೇವಣಿ ಮೊತ್ತವನ್ನು ಚುನಾವಣಾ ಆಯೋಗ ಹಿಂತಿರುಗಿಸುವುದಿಲ್ಲ.

ಇಂದೋರ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಜಯ್ ಕಾಂತಿ ಬಾಮ್ ಅವರನ್ನು ಸ್ಪರ್ಧಾ ಕಣಕ್ಕೆ ಇಳಿಸಲಾಗಿತ್ತು. ನಾಮಪತ್ರ ಸಲ್ಲಿಸಿ ಪ್ರಚಾರ ಕಣದಲ್ಲಿದ್ದಾಗಲೇ ಸಂಜಯ್ ಕಾಂತಿ ಸ್ಪರ್ಧಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದರು. ಬಿಜೆಪಿ ಆಪರೇಶನ್ ಗೆ ಬಲಿಯಾಗಿದ್ದ ಸಂಜಯ್ ಕಾಂತಿ ಬಳಿಕ ಕೇಸರಿ ಪಕ್ಷ ಸೇರ್ಪಡೆಯಾಗಿದ್ದರು. ಮೇ 13ರಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ನೋಟಾ ಪರವಾಗಿ ಅಭಿಯಾನ ನಡೆಸಿದ್ದರು. ಇದರಿಂದಾಗಿ ಎರಡನೇ ಅತಿಹೆಚ್ಚು ಮತಗಳು ನೋಟಾಗೆ ಬಿದ್ದಿದೆ. ಏಕಮುಖದ ಸ್ಪರ್ಧೆಯಿಂದಾಗಿ ಶಂಕರ್ ಲಾಲ್ವಾನಿ 11.72 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದು ಗೆಲುವಿನ ಅಂತರದಲ್ಲಿ ದಾಖಲೆ ಸ್ಥಾಪಿಸಿದ್ದಾರೆ. ಅಸ್ಸಾಂನ ಧುಬ್ರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸಿನ ರಕೀಬುಲ್ ಹುಸೇನ್ 10.12 ಲಕ್ಷದ ಅಂತರ, ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಲ್ಲಿ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ 8.21 ಲಕ್ಷ ಮತಗಳ ಅಂತರದಲ್ಲಿ ಗೆದ್ದಿರುವುದು ಆನಂತರದ ದಾಖಲೆಯಾಗಿದೆ.  

2019ರಲ್ಲಿ ಇಂದೋರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ಪಂಕಜ್ ಸಾಂಘ್ವಿ ವಿರುದ್ಧ 5.48 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಇಂದೋರಿನಲ್ಲಿ ಬಿಜೆಪಿ 35 ವರ್ಷಗಳಿಂದ ಗೆಲ್ಲುತ್ತ ಬಂದಿದ್ದು, ಈ ಬಾರಿ ಕಣದಲ್ಲಿದ್ದ 13 ಮಂದಿ ಒಟ್ಟು 1,16,543 ಮತಗಳನ್ನು ಪಡೆದಿದ್ದರೆ, ಅದಕ್ಕಿಂತ ಹೆಚ್ಚು ಮತಗಳನ್ನು ಕಾಂಗ್ರೆಸಿಗರು ನೋಟಾಕ್ಕೆ ಹಾಕಿದ್ದು ವಿಶೇಷ.

ಕರ್ನಾಟಕದಲ್ಲಿ 2.18 ಲಕ್ಷ ಮತ ನೋಟಾಗೆ

ಮಧ್ಯಪ್ರದೇಶದ ಒಂದು ಕ್ಷೇತ್ರದಲ್ಲಿ ಬಿದ್ದ ಮತದಷ್ಟೇ ಪ್ರಮಾಣದಲ್ಲಿ ಕರ್ನಾಟಕದ 28 ಸ್ಥಾನಗಳಲ್ಲಿ ಜನರು ನೋಟಾಕ್ಕೆ ಮತ ಚಲಾಯಿಸಿದ್ದಾರೆ. ಒಟ್ಟು 2,18,300 ಮಂದಿ ನೋಟಾ ಗುರುತಿಗೆ ಮತ ಹಾಕಿದ್ದು 2019ರ ಚುನಾವಣೆಗೆ ಹೋಲಿಸಿದರೆ ಕೊಂಚ ಕಡಿಮೆ ಇದೆ. ಕಳೆದ ಬಾರಿ 2,50,810 ಮತ ನೋಟಾ ಪರವಾಗಿ ಬಿದ್ದಿತ್ತು. ಕರ್ನಾಟಕದಲ್ಲಿ ಅತಿ ಹೆಚ್ಚು ನೋಟಾ ದಾಖಲಾಗಿದ್ದು ದಕ್ಷಿಣ ಕನ್ನಡ ಕ್ಷೇತ್ರದಲ್ಲಿ. 23576 ಮತಗಳು ನೋಟಾ ಪರವಾಗಿ ಬಿದ್ದಿದ್ದರೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 13554 ಮತಗಳು ಬಿದ್ದಿವೆ. ಬೆಂಗಳೂರು ಕೇಂದ್ರದಲ್ಲಿ 12126, ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ 11260, ಹಾವೇರಿ ಕ್ಷೇತ್ರದಲ್ಲಿ 10865, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 10649, ಉತ್ತರ ಕನ್ನಡ ಕ್ಷೇತ್ರದಲ್ಲಿ 10176 ಮತಗಳು ನೋಟಾ ಪರವಾಗಿ ಚಲಾವಣೆ ಆಗಿವೆ.

No contest to NOTA, Indore scripts electoral history in 2024 Lok Sabha election, dakshina Kannada highest in karnataka.Indore on June 4 rewrote history by registering the highest-ever NOTA votes in the country at 2,18,674, overtaking a record posted by Bihar’s Gopalganj in 2019, while the BJP candidate Shankar Lalwani won the Lok Sabha election from the seat in Madhya Pradesh by a staggering margin of 11,75,092 votes.