ಯುಜಿಸಿ ನೆಟ್ ಅಕ್ರಮದ ಬಗ್ಗೆ ಸಿಬಿಐ ಎಫ್ಐಆರ್ ; ನೀಟ್ ಅಕ್ರಮದಲ್ಲಿ ಬಿಹಾರದಲ್ಲಿ ಏಳು ಮಂದಿ ಸೆರೆ, ಪ್ರಶ್ನೆಪತ್ರಿಕೆಗೆ ತಲಾ 40 ಲಕ್ಷ ನೀಡಿದ್ದಾಗಿ ನಾಲ್ವರು ಅಭ್ಯರ್ಥಿಗಳ ತಪ್ಪೊಪ್ಪಿಗೆ, ನೀಟ್ ರದ್ದು ಬಗ್ಗೆ ಇನ್ನೂ ನಿರ್ಧರಿಸದ ಕೇಂದ್ರ ಸರಕಾರ

21-06-24 05:37 pm       HK News Desk   ದೇಶ - ವಿದೇಶ

ಯುಜಿಸಿ ನೆಟ್ ಪರೀಕ್ಷೆಯನ್ನು ಕೇಂದ್ರ ಸರಕಾರ ರದ್ದುಪಡಿಸಿದ ಬೆನ್ನಲ್ಲೇ ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಎಫ್ಐಆರ್ ದಾಖಲು ಮಾಡಿದೆ.

ನವದೆಹಲಿ, ಜೂನ್ 21: ಯುಜಿಸಿ ನೆಟ್ ಪರೀಕ್ಷೆಯನ್ನು ಕೇಂದ್ರ ಸರಕಾರ ರದ್ದುಪಡಿಸಿದ ಬೆನ್ನಲ್ಲೇ ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಎಫ್ಐಆರ್ ದಾಖಲು ಮಾಡಿದೆ. ಜೂನ್ 18ರಂದು ದೇಶಾದ್ಯಂತ ಯುಜಿಸಿ ನೆಟ್ ಪರೀಕ್ಷೆ ನಡೆದಿದ್ದು, 9 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಸಾಧ್ಯತೆ ಇದೆಯೆಂಬ ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಯಾವುದೇ ದೂರು ಬಂದಿಲ್ಲವಾದರೂ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಿದ್ದು ಲೋಪ ಆಗಿದೆಯೇ ಎನ್ನುವ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ ಎಂದು ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ತಿಳಿಸಿದ್ದಾರೆ.

ಇದೇ ವೇಳೆ ಬಿಹಾರದಲ್ಲಿ ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ವಿಚಾರದಲ್ಲಿ ಪೊಲೀಸರು ನಾಲ್ವರು ಅಭ್ಯರ್ಥಿಗಳು ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಪ್ರಶ್ನೆ ಪತ್ರಿಕೆಯನ್ನು 32 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು ಎನ್ನುವ ಬಗ್ಗೆ ಆರೋಪಿಗಳು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯ ಪ್ರತಿಯನ್ನು ಇಂಡಿಯಾ ಟುಡೇ ಟಿವಿ ಪ್ರಸಾರ ಮಾಡಿದೆ. ಮೇ 5ರಂದು ನೀಟ್ ಪರೀಕ್ಷೆ ನಡೆದಿದ್ದು, ಅದಕ್ಕೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎನ್ನುವ ಆರೋಪ ಇದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ತಂಡದಲ್ಲಿದ್ದ ಅಮಿತ್ ಆನಂದ್, ನಿತೀಶ್ ಕುಮಾರ್ ಮತ್ತು ಹಣ ಕೊಟ್ಟು ಪ್ರಶ್ನೆ ಪತ್ರಿಕೆ ಪಡೆದ ಆರೋಪದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

Confession letter by Anurag Yadav (Credits: India Today)

Abhishek Kumar's confession letter (Credits: India Today)

Awdhesh Kumar's confession letter (Credits: India Today)

ಅಮಿತ್ ಆನಂದ್ ಮತ್ತು ನಿತೀಶ್ ಕುಮಾರ್ ಅವರ ತಪ್ಪೊಪ್ಪಿಗೆ ಹೇಳಿಕೆಯ ಪ್ರಕಾರ, ಬಿಹಾರದ ದಾನಾಪುರ್ ಪುರಸಭೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಸಿಕಂದರ್ ಪ್ರಸಾದ್ ಯಾದವೇಂದು ಎಂಬಾತ ಪ್ರಶ್ನೆ ಪತ್ರಿಕೆಗಾಗಿ ಸಂಪರ್ಕ ಮಾಡಿದ್ದ. ತನ್ನ ಅಳಿಯ ಮತ್ತು ಇತರ ನಾಲ್ವರು ಅಭ್ಯರ್ಥಿಗಳಿಗಾಗಿ ಯಾದವೇಂದು ಪ್ರಶ್ನೆ ಪತ್ರಿಕೆ ಕೇಳಿದ್ದು, ಅದಕ್ಕಾಗಿ ನಿತೀಶ್ ಮತ್ತು ಆನಂದ್ 32 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು. ಪರೀಕ್ಷೆಯ ಮುನ್ನಾ ದಿನ ಮೇ 4ರಂದು ಪಾಟ್ನಾದ ಗೆಸ್ಟ್ ಹೌಸ್ ಗೆ ಕರೆಸಿದ್ದ ನಿತೀಶ್ ಮತ್ತು ಆನಂದ್, ಅಭ್ಯರ್ಥಿಗಳಿಗೆ ಪರೀಕ್ಷೆಗೆ ಬರುವ ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡಿದ್ದರು. ಮರುದಿನ ಅದೇ ಪ್ರಶ್ನೆಗಳು ಪರೀಕ್ಷೆಗೆ ಬಂದಿದ್ದವು ಎಂದು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂಜಿನಿಯರ್ ಸಿಕಂದರ್ ಪ್ರಸಾದ್ ಯಾದವೇಂದು ಅವರ ಸೋದರಳಿಯನಾಗಿದ್ದು, ಮಾವನ ಮೂಲಕ ಪ್ರಶ್ನೆ ಪತ್ರಿಕೆ ಪಡೆದು ರಾಜಸ್ಥಾನದ ಕೋಟಾದಲ್ಲಿ ಪರೀಕ್ಷೆ ಬರೆದಿದ್ದ ಅನುರಾಗ್ ಯಾದವ್ ಕೂಡ ಬಂಧಿತನಾಗಿದ್ದು, ಈ ಆರೋಪವನ್ನು ಪುಷ್ಟೀಕರಿಸುವಂತೆ ಹೇಳಿಕೆ ನೀಡಿದ್ದಾನೆ. ಮಾವ ಹೇಳಿದ ರೀತಿಯಲ್ಲೇ ಮಾಡಿದ್ದೇನೆ. ಮಾವನ ಮೂಲಕ ಪರಿಚಯ ಆಗಿದ್ದ ನಿತೀಶ್ ಮತ್ತು ಆನಂದ್, ಪರೀಕ್ಷೆಗೆ ಬರುವ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಹೇಳಿಕೊಟ್ಟಿದ್ದರು. ಮುನ್ನಾ ದಿನ ರಾತ್ರಿಯಿಡೀ ಸ್ಟಡಿ ಮಾಡಿ ಮರುದಿನ ಪರೀಕ್ಷೆ ಬರೆದಿದ್ದೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಅನುರಾಗ್ ಯಾದವ್ ಗೆ ಸಂಬಂಧಿಯಾಗಿರುವ ಶಿವಾನಂದ ಕುಮಾರ್ ಎನ್ನುವ ಇನ್ನೊಬ್ಬ ಅಭ್ಯರ್ಥಿಯೂ ಇದೇ ರೀತಿ ಹೇಳಿಕೆ ನೀಡಿದ್ದಾನೆ. ಯಾದವೇಂದು ಅಂಕಲ್ ಹೇಳಿದ ರೀತಿಯಲ್ಲೇ ಮಾಡಿದ್ದೇನೆ. ಮೇ 4ರಂದು ನಮ್ಮನ್ನು ಗೆಸ್ಟ್ ಹೌಸ್ ಕರೆಸಿಕೊಂಡು ಪ್ರಶ್ನೆ ಪತ್ರಿಕೆ ನೀಡಿದ್ದರು ಎಂದು ಹೇಳಿದ್ದಾನೆ. ಪರೀಕ್ಷೆ ಬರೆದ ಇನ್ನೊಬ್ಬ ವಿದ್ಯಾರ್ಥಿ ಅಭಿಷೇಕ್ ಕುಮಾರ್ ತಂದೆಯಾಗಿರುವ ಅವಧೇಶ್ ಕುಮಾರ್, ತಾನು ಯಾದವೇಂದು ಅವರಿಗೆ ಪ್ರಶ್ನೆಗಳಿಗಾಗಿ 40 ಲಕ್ಷ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿ ಆಯುಷ್ ರಾಜ್ ಎಂಬಾತನ ತಂದೆ ಅಖಿಲೇಶ್ ಕುಮಾರ್ ಇದೇ ರೀತಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ತಾನು ಕೂಡ ಯಾದವೇಂದುಗೆ 40 ಲಕ್ಷ ನೀಡಿದ್ದಾಗಿ ಹೇಳಿದ್ದಾರೆ.

ಆರೋಪಿಗಳಿಗೆ ಪಾಟ್ನಾದಲ್ಲಿ ನಿಲ್ಲುವುದಕ್ಕೆ ಸರಕಾರಿ ಗೆಸ್ಟ್ ಹೌಸ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಮಾಜಿ ಡಿಸಿಎಂ, ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅವರ ಪಿಎ ಪ್ರೀತಂ ಕುಮಾರ್ ಮಾಡಿಸಿದ್ದ ಎನ್ನುವ ಆರೋಪಗಳಿವೆ. ಹೀಗಾಗಿ ಬಿಜೆಪಿ ನಾಯಕರು, ಪ್ರಕರಣದಲ್ಲಿ ಆರ್ ಜೆಡಿ ಲಿಂಕ್ ಹೊಂದಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ. 

The Patna Police has arrested seven people, including four candidates, in connection with the NEET-UG question paper leak case. India Today TV has accessed the confession letters of all accused, which revealed that Rs 32 lakh were charged by a problem-solver gang to provide the leaked question papers.