ಪ್ರತಿಪಕ್ಷ ನಾಯಕನಾಗಿ ಮೊದಲ ಭಾಷಣದಲ್ಲೇ ವಿವಾದಕ್ಕೆ ಸಿಲುಕಿದ ರಾಹುಲ್ ಗಾಂಧಿ ; ಬಿಜೆಪಿ, ಆರೆಸ್ಸೆಸ್ ನವರು ಹಿಂದುಗಳೇ ಅಲ್ಲ, ಹಿಂದು ಯಾವತ್ತೂ ಭಯ, ದ್ವೇಷ ಹಬ್ಬಿಸಲ್ಲ ! ಹಿಂದುಗಳನ್ನು ಹಿಂಸೆಗೆ ಹೋಲಿಸಿದ್ದಾರೆಂದು ಬಿಜೆಪಿ ಆಕ್ರೋಶ

01-07-24 10:57 pm       HK News Desk   ದೇಶ - ವಿದೇಶ

ಪ್ರತಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬಿಜೆಪಿ ಮತ್ತು ಹಿಂದುಗಳ ಬಗ್ಗೆ ಆಡಿರುವ ಮಾತು ವಿವಾದದ ಕಿಡಿ ಎಬ್ಬಿಸಿದೆ. ತಮ್ಮನ್ನು ಹಿಂದುಗಳೆಂದು ಹೇಳಿಕೊಳ್ಳುವ ನಮ್ಮ ಮಹಾ ನಾಯಕರು ಅಹಿಂಸೆ ಬಗ್ಗೆ ಮಾತನಾಡುತ್ತಾರೆ, ಆದರೆ ದಿನಪೂರ್ತಿ ಹಿಂಸೆ, ದ್ವೇಷವನ್ನೇ ಹಬ್ಬಿಸುತ್ತಿದ್ದಾರೆ.

ನವದೆಹಲಿ, ಜುಲೈ 1: ಪ್ರತಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬಿಜೆಪಿ ಮತ್ತು ಹಿಂದುಗಳ ಬಗ್ಗೆ ಆಡಿರುವ ಮಾತು ವಿವಾದದ ಕಿಡಿ ಎಬ್ಬಿಸಿದೆ. ತಮ್ಮನ್ನು ಹಿಂದುಗಳೆಂದು ಹೇಳಿಕೊಳ್ಳುವ ನಮ್ಮ ಮಹಾ ನಾಯಕರು ಅಹಿಂಸೆ ಬಗ್ಗೆ ಮಾತನಾಡುತ್ತಾರೆ, ಆದರೆ ದಿನಪೂರ್ತಿ ಹಿಂಸೆ, ದ್ವೇಷವನ್ನೇ ಹಬ್ಬಿಸುತ್ತಿದ್ದಾರೆ. ನೀವು ಹಿಂದುಗಳೇ ಅಲ್ಲ ಎಂದು ನೇರವಾಗಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.

ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು ರಾಹುಲ್ ಗಾಂಧಿ ಹಿಂದುಗಳನ್ನು ಅವಮಾನಿಸಿದ್ದಾರೆಂದು ಆರೋಪಿಸಿದ್ದಾರೆ. ಪ್ರತಿಪಕ್ಷ ನಾಯಕರಾಗಿ ಸಂಸತ್ತಿನಲ್ಲಿ ಮೊದಲ ಬಾರಿಗೆ ರಾಹುಲ್ ಗಾಂಧಿ ಮಾತನಾಡಿದ್ದು, ಸಂವಿಧಾನದ ಪ್ರತಿ ಮತ್ತು ಶಿವ ದೇವರ ಫೋಟೋ ಹಿಡಿದು ಭಾಷಣ ಮಾಡಿದ್ದು ಮೊದಲ ಮಾತಿನಲ್ಲೇ ವಿವಾದಕ್ಕೆ ಸಿಲುಕಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಎಲ್ಲ ಹಿಂದುಗಳನ್ನು ಪ್ರತಿನಿಧಿಸುವುದಿಲ್ಲ. ಇವರು ದೇಶದಲ್ಲಿ ಭಯ ಮತ್ತು ದ್ವೇಷವನ್ನು ಮೂಡಿಸುತ್ತಿದ್ದಾರೆ. ನಿಮ್ಮನ್ನು ಹೇಗೆ ಹಿಂದುಗಳೆಂದು ಒಪ್ಪಿಕೊಳ್ಳುವುದು. ಹಿಂದುಗಳು ಯಾವತ್ತೂ ದ್ವೇಷ ಹಬ್ಬಿಸುವುದಿಲ್ಲ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಸಂಸತ್ತಿನಲ್ಲಿ ಆಡಳಿತ ಪಕ್ಷಗಳು ಗದ್ದಲ ಎಬ್ಬಿಸಿದ್ದು, ಬಿಜೆಪಿ ಸದಸ್ಯರು ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ. ಇಡೀ ಹಿಂದು ಸಮುದಾಯವನ್ನು ಹಿಂಸಾಕಾರರು ಎಂದು ಹೇಳಿರುವುದು ಗಂಭೀರ ವಿಷಯ. ಪ್ರತಿಪಕ್ಷ ನಾಯಕನಾಗಿ, ಸಂವಿಧಾನ ಹಿಡಿದು ಪ್ರಮಾಣ ಎಸಗಿದ ವ್ಯಕ್ತಿ ಒಂದು ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಆದರೆ ರಾಹುಲ್ ತನ್ನ ಮಾತನ್ನು ಮುಂದುವರಿಸಿದ್ದಾರೆ. ಶಿವನ ಮತ್ತು ಗುರುನಾನಕ್ ಫೋಟೋ ಹಿಡಿದು ಹಿಂದುಗಳು ಯಾವತ್ತೂ ದ್ವೇಷ, ಭಯ ಹಬ್ಬಿಸುವುದಿಲ್ಲ. ಆದರೆ ಬಿಜೆಪಿಯವರು 24 ಗಂಟೆ ಪೂರ್ತಿ ದ್ವೇಷ ಹಬ್ಬಿಸುತ್ತಿದ್ದಾರೆ ಎಂದು ಟೀಕಿಸಿದರು.

ಗೃಹ ಸಚಿವ ಅಮಿತ್ ಷಾ ಅವರು ರಾಹುಲ್ ಮಾತನ್ನು ಖಂಡಿಸಿ ಸಂಸತ್ತಿನಲ್ಲೇ ಹೇಳಿಕೆ ನೀಡಿದ್ದು, ವ್ಯವಸ್ಥಿತವಾಗಿ ಭಾರತವನ್ನು, ಭಾರತೀಯರನ್ನು ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಪ್ರತಿಪಕ್ಷದ ನಾಯಕರಾಗಿ ಹಿಂದುಗಳೇ ದೇಶದಲ್ಲಿ ಹಿಂಸೆ ಹಬ್ಬಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಕೋಟ್ಯಂತರ ಜನರು ತಮ್ಮನ್ನು ಹಿಂದುಗಳೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ ಎಂಬುದನ್ನು ಇವರು ತಿಳಿದಿಲ್ಲ. ಯಾವುದೇ ಧರ್ಮವನ್ನು ಹಿಂಸೆಯ ಜೊತೆಗೆ ಸಮೀಕರಿಸುವುದನ್ನು ನಾನು ಒಪ್ಪಲ್ಲ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆಯನ್ನು ಕೇಳಲೇಬೇಕು ಎಂದು ಆಗ್ರಹ ಮಾಡಿದ್ದಾರೆ.

On Monday, Rahul Gandhi, the Leader of Opposition (LoP) in the Lok Sabha, addressed the House for the first time since assuming the position. He slammed the BJP-led NDA government on various fronts, including the portrayal of Hinduism, during which he displayed a picture of Lord Shiva to convey his message.