RSS, Jairam Ramesh, Narendra Modi: ಸರ್ಕಾರಿ ನೌಕರರ ಆರೆಸ್ಸೆಸ್ ಚಟುವಟಿಕೆ ಮೇಲಿನ ನಿಷೇಧ ತೆರವು ; ಇಂದಿರಾ ಗಾಂಧಿ ಕಾಲದಲ್ಲಿ ಹೇರಿದ್ದ ನಿರ್ಬಂಧ, ಅಧಿಕಾರಿ ಶಾಹಿ ಚಡ್ಡಿಯ ಮಟ್ಟಕ್ಕೆ ಬರಲಿದೆ ಎಂದು ಜೈರಾಮ್ ರಮೇಶ್ ಟೀಕೆ 

22-07-24 03:16 pm       HK News Desk   ದೇಶ - ವಿದೇಶ

ಸರ್ಕಾರಿ ನೌಕರರು ಆರೆಸ್ಸೆಸ್ ನಲ್ಲಿ ತೊಡಗಿಕೊಳ್ಳುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.

ನವದೆಹಲಿ, ಜುಲೈ.22: ಸರ್ಕಾರಿ ನೌಕರರು ಆರೆಸ್ಸೆಸ್ ನಲ್ಲಿ ತೊಡಗಿಕೊಳ್ಳುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. 1966 ರಲ್ಲಿ ಸರ್ಕಾರಿ ನೌಕರರು ಆರ್ ಎಸ್ಎಸ್ ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿಷೇಧ ವಿಧಿಸಲಾಗಿತ್ತು. 

2024ರ ಜುಲೈ 9 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ನಿಷೇಧವನ್ನು ಹಿಂಪಡೆದಿದೆ. ಇಲಾಖೆಯಿಂದ ಈ ಕುರಿತು ಹೊರಡಿಸಿರುವ ಆದೇಶದಲ್ಲಿ 1966ರಿಂದ ಜಾರಿಯಲ್ಲಿ ಇರುವ ಸರ್ಕಾರಿ ನೌಕರರ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.‌ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಈ ಆದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, 58 ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಅಸಾಂವಿಧಾನಿಕ ಸೂಚನೆಯನ್ನು ಮೋದಿ ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ಹೇಳಿದ್ದಾರೆ. 30/11/1966ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಉದ್ಯೋಗಗಳಲ್ಲಿ ಇರುವವರ ಮೇಲಿನ ನಿಬಂಧನೆಗಳನ್ನು ಪರಾಮರ್ಶೆಗೆ ಒಳಪಡಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪಾಲ್ಗೊಳ್ಳುವುದಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Rashtriya Swayamsevak Sangh - Wikipedia

ಸರ್ಕಾರದ ಆದೇಶ ಪತ್ರವನ್ನು 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಮಹಾತ್ಮ ಗಾಂಧಿ ಅವರ ಹತ್ಯೆ ಬಳಿಕ 1948ರ ಫೆಬ್ರವರಿಯಲ್ಲಿ ಸರ್ದಾರ್ ಪಟೇಲರು ಆರೆಸ್ಸೆಸ್ ನಿಷೇಧಿಸಿದ್ದರು. ಆನಂತರ, ಉತ್ತಮ ನಡವಳಿಕೆ ಆಶ್ವಾಸನೆಯ ಹಿನ್ನೆಲೆಯಲ್ಲಿ ನಿಷೇಧ ಹಿಂಪಡೆಯಲಾಗಿತ್ತು. ಹಾಗಿದ್ದರೂ ನಾಗಪುರದಲ್ಲಿ ಆರೆಸ್ಸೆಸ್ ಯಾವತ್ತೂ ತ್ರಿವರ್ಣ ಧ್ವಜ ಹಾರಿಸಿಲ್ಲ. ಆರೆಸ್ಸೆಸ್ ಮತ್ತು ಜಮಾತೆ ಇ- ಇಸ್ಲಾಮಿ ಸಂಘಟನೆ ಚಟುವಟಿಕೆಗಳಲ್ಲಿ ಸರ್ಕಾರಿ ಉದ್ಯೋಗಿಗಳು ಭಾಗವಹಿಸುವುದು, ಸದಸ್ಯತ್ವ ಪಡೆಯುವುಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸರ್ಕಾರದ ನೀತಿ ಸರಿಯಾಗಿಯೇ ಇತ್ತು."

2024ರ ಜೂನ್ 4ರ ಬಳಿಕ ಸ್ವಯಂ ರೂಪಿತ ಅಜೈವಿಕ ಪ್ರಧಾನಿ ಹಾಗೂ ಆರೆಸ್ಸೆಸ್ ನಡುವಿನ ಸಂಬಂಧ ಹಳಸಿದೆ. ವಾಜಪೇಯಿ ಅವರ ಅವಧಿಯಲ್ಲಿಯೂ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು 2024ರ ಜುಲೈ 9ರಂದು ತೆರವುಗೊಳಿಸಲಾಗಿದೆ. ನನ್ನ ಪ್ರಕಾರ, ಅಧಿಕಾರಿ ವರ್ಗವು ಇನ್ನು ಚಡ್ಡಿಯ ಮಟ್ಟಕ್ಕೆ ಬರಲಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.

The Narendra Modi-led central government recently lifted a decades-old ban on government employees associating with the Rashtriya Swayamsevak Sangh (RSS) and its activities, a move that was heavily censured by Congress leader Jairam Ramesh.