ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸಂಚಲನ, ಕೇರಳದ ವ್ಯಕ್ತಿಯ ಕಂಪನಿಯಿಂದ ಪೂರೈಕೆ, ನೋರ್ಟಾ ಗ್ಲೋಬಲ್ ಕಂಪನಿ ಪೂರೈಕೆದಾರ ಅಷ್ಟೇ, ನಮ್ಮ ತಪ್ಪಿಲ್ಲ ಎಂದ ಬಲ್ಗೇರಿಯಾ

21-09-24 05:49 pm       H K News   ದೇಶ - ವಿದೇಶ

ಲೆಬನಾನ್ ಮತ್ತು ಸಿರಿಯಾದಲ್ಲಿ ಪೇಜರ್ ಸ್ಫೋಟಗೊಂಡು ಹೆಜ್ಬುಲ್ಲಾ ಉಗ್ರರು ಸಾವನ್ನಪ್ಪಿರುವುದು ಭಾರೀ ಸಂಚಲನ ಮೂಡಿಸಿರುವಾಗಲೇ ಈ ಪೇಜರ್ ಪೂರೈಕೆದಾರ ಕಂಪನಿ ಕೇರಳದ ವ್ಯಕ್ತಿಯದ್ದು ಎನ್ನುವ ಗುಮಾನಿ ಎದ್ದಿದೆ.

ತಿರುವನಂತಪುರಂ, ಸೆ.21; ಲೆಬನಾನ್ ಮತ್ತು ಸಿರಿಯಾದಲ್ಲಿ ಪೇಜರ್ ಸ್ಫೋಟಗೊಂಡು ಹೆಜ್ಬುಲ್ಲಾ ಉಗ್ರರು ಸಾವನ್ನಪ್ಪಿರುವುದು ಭಾರೀ ಸಂಚಲನ ಮೂಡಿಸಿರುವಾಗಲೇ ಈ ಪೇಜರ್ ಪೂರೈಕೆದಾರ ಕಂಪನಿ ಕೇರಳದ ವ್ಯಕ್ತಿಯದ್ದು ಎನ್ನುವ ಗುಮಾನಿ ಎದ್ದಿದೆ. ವಯನಾಡ್ ಜಿಲ್ಲೆಯ ಮಾನಂದವಾಡಿ ನಿವಾಸಿ ರಿನ್ಸನ್ ಜೋಸ್ ಎಂಬ ನಿವಾಸಿ ಸದ್ಯಕ್ಕೆ ನಾರ್ವೆಯಲ್ಲಿದ್ದು, ಆತನಿಗೆ ಸೇರಿದ ನೋರ್ಟಾ ಗ್ಲೋಬಲ್ ಎನ್ನುವ ಕಂಪನಿ ಪೇಜರ್ ಪೂರೈಕೆ ಮಾಡಿತ್ತು ಎನ್ನುವ ವಿಚಾರ ಕೆಲವು ವಿದೇಶಿ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಲೆಬನಾನ್ ನಲ್ಲಿರುವ ಹೆಜ್ಬುಲ್ಲಾ ಸಂಘಟನೆಯ ಸದಸ್ಯರು ತೈವಾನ್ ಮೂಲದ ಗೋಲ್ಡ್ ಅಪೋಲೊ ಕಂಪನಿಯಿಂದ ಪೇಜರ್ ಖರೀದಿಸಿದ್ದರು. ಆದರೆ, ಖರೀದಿ ಪ್ರಕ್ರಿಯೆ ವೇಳೆ ನೋರ್ಟಾ ಗ್ಲೋಬಲ್ ಎನ್ನುವ ಕಂಪನಿ ಮಧ್ಯಸ್ಥಿಕೆ ವಹಿಸಿತ್ತು ಎನ್ನುವುದನ್ನು ಬೊಟ್ಟು ಮಾಡಲಾಗಿದೆ. ಈ ವರದಿಯನ್ನು ಬಲ್ಗೇರಿಯಾ ತಳ್ಳಿಹಾಕಿದ್ದು, ನೋರ್ಟಾ ಗ್ಲೋಬಲ್ ಅನ್ನುವ ಕಂಪನಿಯಿಂದ ತಪ್ಪು ಆಗಿಲ್ಲ ಎಂದು ಹೇಳಿಕೊಂಡಿದೆ. ಇದೇ ವೇಳೆ ತೈವಾನ್ ದೇಶದ ಗೋಲ್ಡ್ ಅಪೋಲೋ, ಅದು ನಮ್ಮ ಉತ್ಪನ್ನ ಅಲ್ಲ, ನಮ್ಮ ಬ್ರಾಂಡ್ ಅಷ್ಟೇ ಎಂದು ಹೇಳಿಕೊಂಡಿದೆ. ಬುಡಾಪೆಸ್ಟ್ ಮೂಲದ ಬಿಎಸಿ ಕನ್ಸಲ್ಟಿಂಗ್ ಎನ್ನುವ ಕಂಪನಿ ಮೂರು ವರ್ಷಗಳ ಹಿಂದೆ ಪೇಜರ್ ತಯಾರಿಸುವ ಗುತ್ತಿಗೆ ಪಡೆದಿತ್ತು ಎಂದು ಗೋಲ್ಡ್ ಅಪೋಲೊ ಹೇಳಿದೆ. 

ಬಿಎಸಿ ಕನ್ಸಲ್ಟಿಂಗ್ ಸಂಸ್ಥೆಯು ಗೋಲ್ಡ್ ಅಪೋಲೊ ಮತ್ತು ನೋರ್ಟಾ ಗ್ಲೋಬಲ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಬಿಎಸಿ ಅನ್ನುವುದು ಬಲ್ಗೇರಿಯಾದ ಎಡ್ರಸ್ ಹೊಂದಿದ್ದರೂ, ಅದು ನೈಜವಾಗಿಲ್ಲ. ಅದರ ಹಿಂದೆ ಇಸ್ರೇಲ್ ಇದೆ. ಇಸ್ರೇಲ್ ಸ್ಥಾಪಿಸಿರುವ ನಕಲಿ ಕಂಪನಿಯೇ ಬಿಎಸಿ ಕನ್ಸಲ್ಟಿಂಗ್ ಆಗಿದೆ ಎಂದು ಟೆಲೆಕ್ಸ್ ಎನ್ನುವ ಹಂಗೇರಿ ಪತ್ರಿಕೆ ಬರೆದುಕೊಂಡಿದೆ. ನೋರ್ಟಾ ಗ್ಲೋಬಲ್ ಎನ್ನುವುದು 2022ರಲ್ಲಿ ಸ್ಥಾಪನೆಯಾಗಿದ್ದು, ನಾರ್ವೆ ನಿವಾಸಿ ರಿನ್ಸನ್ ಜೋಸ್ ಹೆಸರಲ್ಲಿದೆ. ಜಗತ್ತಿನಲ್ಲಿ 196 ಕಂಪನಿಗಳ ಜೊತೆಗೆ ಪೂರೈಕೆದಾರ ಸೇವೆಯನ್ನು ಈ ಕಂಪನಿ ಒದಗಿಸುತ್ತಿದೆ. ಬಲ್ಗೇರಿಯಾ ರಾಜಧಾನಿ ಸೋಫಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದೇ ವೇಳೆ, ಲೆಬನಾನಲ್ಲಿ ಸ್ಫೋಟಗೊಂಡ ಪೇಜರ್ ಹಿಂದೆ ನೋರ್ಟಾ ಗ್ಲೋಬಲ್ ಇದೆಯೆಂಬ ಮಾಧ್ಯಮ ವರದಿಯನ್ನು ಬಲ್ಗೇರಿಯಾ ನ್ಯಾಶನಲ್ ಸೆಕ್ಯುರಿಟಿ ಏಜನ್ಸಿ ಅಲ್ಲಗಳೆದಿದೆ. ಪೇಜರ್ ನಮ್ಮಲ್ಲಿ ತಯಾರಾದುದಲ್ಲ. ನಮ್ಮ ದೇಶದಿಂದ ರವಾನೆಯಾಗಿದ್ದೂ ಅಲ್ಲ. ನೋಟ್ರಾ ಗ್ಲೋಬಲ್ ಪೂರೈಕೆದಾರ ಕಂಪನಿಯಷ್ಟೇ ಎಂದು ಹೇಳಿದೆ. 

ವಯನಾಡಿನಲ್ಲಿ ಸುದ್ದಿ ಸಂಚಲನ 

ಇತ್ತ ರಿನ್ಸನ್ ಜೋಸ್ ಕೇರಳ ನಿವಾಸಿ ಎನ್ನುವ ವಿಚಾರ ಭಾರತಕ್ಕೂ ಲೆಬನಾನ್ ಸ್ಫೋಟಕ್ಕೂ ಸಂಬಂಧ ಇದೆಯಾ ಎನ್ನುವ ಚರ್ಚೆಗೆ ಕಾರಣವಾಗಿದೆ. ಕೇರಳದ ವಯನಾಡಿನಲ್ಲಿ ರಿನ್ಸನ್ ಜೋಸ್ ಸಂಬಂಧಿಕರು, ಮನೆಯವರು ಅಚ್ಚರಿಗೆ ಒಳಗಾಗಿದ್ದಾರೆ. ರಿನ್ಸನ್ ಬಲ್ಗೇರಿಯಾದಲ್ಲಿ ಕಂಪನಿ ಸ್ಥಾಪಿಸಿರುವ ಮಾಹಿತಿಯನ್ನು ನಮಗೇನೂ ಹೇಳಿಲ್ಲ. ಟೆರರ್ ಲಿಂಕ್ ಇರುವ ಮಾಹಿತಿ ಕೇಳಿ ಅಚ್ಚರಿಯಾಗಿದೆ ಎಂದು ರಿನ್ಸನ್ ಸೋದರ ಅಜು ಜಾನ್ ಮನೋರಮಾ ಪತ್ರಿಕೆಗೆ ತಿಳಿಸಿದ್ದಾರೆ. ರಿನ್ಸನ್ ಜೋಸ್ ಅವರ ಒಬ್ಬ ಸೋದರ ಯುಕೆಯಲ್ಲಿದ್ದು, ಇನ್ನೊಬ್ಬ ತಂಗಿ ಐರ್ಲೆಂಡಿನಲ್ಲಿರುವುದಾಗಿ ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. 

ರಿನ್ಸನ್ ಜೋಸ್ ಮಾನಂದವಾಡಿಯ ಮೇರಿ ಮಾತಾ ಕಾಲೇಜಿನಲ್ಲಿ ಪದವಿ ಪೂರೈಸಿದ್ದು ಬಳಿಕ ಎಂಬಿಎ ಓದಿದ್ದ. ಆನಂತರ, ನಾರ್ವೇಗೆ ಕೇರ್ ಟೇಕರ್ ಆಗಿ ಉದ್ಯೋಗಕ್ಕೆ ತೆರಳಿದ್ದ. ಅಲ್ಲಿಯೇ ಕಂಪನಿಯನ್ನು ಸ್ಥಾಪನೆ ಮಾಡಿದ್ದ. ಕೊನೆಯ ಬಾರಿಗೆ 2023ರ ನವೆಂಬರ್ ನಲ್ಲಿ ಊರಿಗೆ ಬಂದಿದ್ದು, ಆನಂತರ ಜನವರಿ ತಿಂಗಳಲ್ಲಿ ನಾರ್ವೆಗೆ ಹಿಂತಿರುಗಿದ್ದ. ಆತನ ಕೆಲಸ ಏನು, ಯಾವ ರೀತಿಯ ಕೆಲಸ ಮಾಡುತ್ತಿದ್ದಾನೆಂದು ನಮಗೆ ತಿಳಿದಿಲ್ಲ ಎಂದು ಆತನ ಮಾವ ತಂಗಚ್ಚನ್ ಹೇಳಿದ್ದಾರೆ. 

Kerala-born Norwegian businessman Rinson Jose has been accused of selling pagers linked to the Lebanon blasts through his company Norta Global, reported Hungarian news site Telex.