BJP Devendra Fadnavis, Eknath Shinde: ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಯಾರು ? ಸಿಎಂ ಸ್ಥಾನಕ್ಕೆ ಏಕನಾಥ ಶಿಂಧೆ ರಾಜಿನಾಮೆ, ಫಡ್ನವಿಸ್ ಬದಲಾವಣೆ ಆಗುತ್ತಾ? ಹೊಸಬರ ಹುಡುಕಾಟದಲ್ಲಿ ಕೇಂದ್ರ ನಾಯಕರು 

26-11-24 07:32 pm       HK News Desk   ದೇಶ - ವಿದೇಶ

ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಹೊಸ ಸರ್ಕಾರ ರಚಿಸುವ ನಿಟ್ಟಿನಲ್ಲಿ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಮುಂಬೈ, ನ.26: ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಹೊಸ ಸರ್ಕಾರ ರಚಿಸುವ ನಿಟ್ಟಿನಲ್ಲಿ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. 

ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಏಕನಾಥ ಶಿಂಧೆ ಅವರೇ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. 

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145 ಆಗಿದ್ದು ಬಿಜೆಪಿ  ಕೆಲವೇ ಸ್ಥಾನಗಳಿಂದ ಹಿಂದಕ್ಕುಳಿದಿದೆ. 'ಮಹಾಯುತಿ' ಮೈತ್ರಿಕೂಟದ ನೆರವಿನಿಂದ ಹೊಸ ಸರ್ಕಾರ ರಚಿಸಲಿದೆ. ಮೈತ್ರಿಕೂಟದ ಒಟ್ಟು ಶಾಸಕರ ಬಲ 230 ಇದೆ. ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳಲ್ಲಿ ಜಯಗಳಿಸಿವೆ. 

2022ರಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಬಿಜೆಪಿ ಜೊತೆ ಕೈ ಜೋಡಿಸಿದ್ದರು. ಆನಂತರ ಶಿಂಧೆ ಅವರನ್ನೇ ಮುಖ್ಯಮಂತ್ರಿ ಮಾಡಿ ಬಿಜೆಪಿ ಸರ್ಕಾರ ರಚಿಸಿತ್ತು‌. ಈ ಬಾರಿಯ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ಕೇವಲ 20 ಸೀಟುಗಳಲ್ಲಿ ಜಯಗಳಿಸಿದೆ.  

ದೇವೇಂದ್ರ ಫಡ್ನವೀಸ್ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ರಾಷ್ಟ್ರೀಯ ನಾಯಕರು ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. 2014- 2019ರ ತನಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್, 2022ರಲ್ಲಿ ಮಹಾಯುತಿ ಮೈತ್ರಿಕೂಟದ ಸರ್ಕಾರದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರು. ಬ್ರಾಹ್ಮಣ ಸಮುದಾಯದ ಫಡ್ನವಿಸ್ ಪರವಾಗಿ ಆರೆಸ್ಸೆಸ್ ಬೆಂಬಲ ಇದ್ದರೂ, ಕೇಂದ್ರ ನಾಯಕರು ಬೆಂಬಲ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ಮಧ್ಯಪ್ರದೇಶ ರೀತಿಯಲ್ಲಿ ಹಿಂದುಳಿದ ವರ್ಗದ ಮತ್ತೊಬ್ಬ ವ್ಯಕ್ತಿಯನ್ನು ಸಿಎಂ ಸ್ಥಾನಕ್ಕೆ ತಂದರೂ ಅಚ್ಚರಿಯಿಲ್ಲ.

BJP leader Devendra Fadnavis and Shiv Sena supremo Eknath Shinde are reportedly vying for the top political position of Maharashtra. The BJP's claim for the post of the chief minister was bolstered by its performance in the assembly election, as it became the single-largest party by winning 132 seats.