NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟೋಲ್ ಶುಲ್ಕ ಕಟ್ಟಿಸಿದ್ದಕ್ಕೆ ಹೆದ್ದಾರಿ ಪ್ರಾಧಿಕಾರಕ್ಕೆ 17 ಸಾವಿರ ದಂಡ ! ಟೋಲ್ ಸಿಬಂದಿಗೆ ಛಡಿಯೇಟು ಕೊಟ್ಟ ಗ್ರಾಹಕರ ಆಯೋಗದ ತೀರ್ಪು

01-02-25 09:51 pm       HK News Desk   ದೇಶ - ವಿದೇಶ

ಅಂಗವಿಕಲ ಮಹಿಳೆಯೊಬ್ಬರನ್ನು ಅವಮಾನಿಸಿ, ಅವರಿಂದ ಅಕ್ರಮವಾಗಿ 40 ರುಪಾಯಿ ಟೋಲ್ ಶುಲ್ಕವನ್ನು ಪಡೆದಿದ್ದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗ್ರಾಹಕರ ಆಯೋಗದಿಂದ 17 ಸಾವಿರ ರೂಪಾಯಿ ದಂಡ ವಿಧಿಸಿದ ಪ್ರಸಂಗ ಚಂಡೀಗಢದಲ್ಲಿ ನಡೆದಿದೆ.

ಚಂಡೀಗಢ, ಫೆ.1: ಅಂಗವಿಕಲ ಮಹಿಳೆಯೊಬ್ಬರನ್ನು ಅವಮಾನಿಸಿ, ಅವರಿಂದ ಅಕ್ರಮವಾಗಿ 40 ರುಪಾಯಿ ಟೋಲ್ ಶುಲ್ಕವನ್ನು ಪಡೆದಿದ್ದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗ್ರಾಹಕರ ಆಯೋಗದಿಂದ 17 ಸಾವಿರ ರೂಪಾಯಿ ದಂಡ ವಿಧಿಸಿದ ಪ್ರಸಂಗ ಚಂಡೀಗಢದಲ್ಲಿ ನಡೆದಿದೆ.

ಚಂಡೀಗಢ ನಿವಾಸಿ, ಅಂಗವಿಕಲ ಮಹಿಳೆ ಗೀತಾ ಎಂಬವರು ದಿವ್ಯಾಂಗನ್ ಯೋಜನೆಯಡಿ ಹೊಸ ಕಾರು ಖರೀದಿಸಿದ್ದರು. ಸರಕಾರದ ಕಾನೂನು ಪ್ರಕಾರ, ದತ್ತು ನಿಮಯದಡಿ ಖರೀದಿಸಲ್ಪಟ್ಟ ವಾಹನಕ್ಕೆ ಟೋಲ್ ವಿನಾಯ್ತಿ ಇರುವ ಬಗ್ಗೆ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ (ಆರ್ ಸಿ) ನಲ್ಲಿ ಉಲ್ಲೇಖವಾಗಿರುತ್ತದೆ. 2024ರ ಎಪ್ರಿಲ್ 28ರಂದು ಗೀತಾ ಅವರು ತನ್ನ ಕುಟುಂಬಸ್ಥರೊಂದಿಗೆ ಹಿಮಾಚಲ ಪ್ರದೇಶದ ಕಸೌಲಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಕಾರಿನಲ್ಲಿ ತೆರಳುವಾಗ ಹೆದ್ದಾರಿಯಲ್ಲಿ ಯಾವುದೇ ಟೋಲ್ ನಲ್ಲಿ ಶುಲ್ಕ ವಿಧಿಸಿರಲಿಲ್ಲ.

ಅದೇ ದಿನ ಹಿಂತಿರುಗಿ ಬರುತ್ತಿದ್ದಾಗ ಚಂಡೀಗಢ ಜಿಲ್ಲೆಯ ಚಂಡಿ ಮಂದಿರ ಟೋಲ್ ಗೇಟ್ ನಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಈಕೆಯ ಆರ್ ಸಿಯನ್ನು ತೋರಿಸಿದರೂ, ಅಲ್ಲಿನ ಸಿಬಂದಿ ಅವಾಚ್ಯವಾಗಿ ನಿಂದಿಸಿ ನೀವು ಅಂಗವಿಕಲೆ ಎನ್ನುವುದಕ್ಕೆ ಯಾವ ದಾಖಲೆ ಇದೆ, ವೈದ್ಯರ ಸರ್ಟಿಫಿಕೇಟ್ ಇದೆಯಾ, ಕಾರಿನಿಂದ ಹೊರಗಿಳಿದು ನಡೆದು ತೋರಿಸಿ ಎಂದು ಆವಾಜ್ ಹಾಕಿದ್ದ. ಇವರು ಎಷ್ಟು ವಾದ ಮಾಡಿದರೂ, ಅಲ್ಲಿನ ಸಿಬಂದಿ ಕೇಳಿರಲಿಲ್ಲ. ಬಳಿಕ 40 ರೂಪಾಯಿ ಶುಲ್ಕವನ್ನು ಕಟ್ಟಿಯೇ ಹೋಗುವಂತೆ ಮಾಡಿದ್ದ. ಇದರಿಂದ ಬೇಸತ್ತ ಮಹಿಳೆ ಹೆದ್ದಾರಿ ಪ್ರಾಧಿಕಾರದ ಕಸ್ಟಮರ್ ಕೇರ್ ನಂಬರ್ ಪಡೆದು ದೂರು ದಾಖಲಿಸಿದ್ದರು. ಇಮೇಲ್ ಮೂಲಕವೂ ದೂರು ಹೇಳಿಕೊಂಡಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಆನಂತರ, ಚಂಡೀಗಢ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಮಹಿಳೆ ದೂರು ನೀಡಿದ್ದರು. ಆಯೋಗದಿಂದ ನೋಟೀಸ್ ನೀಡಿದರೂ, ಹೆದ್ದಾರಿ ಪ್ರಾಧಿಕಾರ ಸ್ಪಂದನೆ ಮಾಡಿರಲಿಲ್ಲ. ಆನಂತರ, 2024ರ ಆಗಸ್ಟ್ 16ರಂದು ದೂರನ್ನು ವಿಚಾರಣೆಗೆ ಸ್ವೀಕರಿಸಿತ್ತು. ಮಹಿಳೆ ತನ್ನ ಕಾರಿನ ಬಗ್ಗೆ ದಾಖಲೆಗಳನ್ನು ಕೊಟ್ಟಿದ್ದಲ್ಲದೆ, ಸರ್ಕಾರದ ಕಾನೂನು ಪ್ರಕಾರವೇ ಟೋಲ್ ವಿನಾಯ್ತಿ ಪಡೆದಿರುವ ಬಗ್ಗೆಯೂ ದಾಖಲೆ ನೀಡಿದ್ದರು. ಹೀಗಿರುವಾಗ ಹೆದ್ದಾರಿ ಪ್ರಾಧಿಕಾರ ಬಲವಂತದಿಂದ ಟೋಲ್ ಪಡೆಯುವ ಹಾಗಿಲ್ಲ ಎಂದು ವಾದ ಮಂಡಿಸಿದ್ದರು. ಅಲ್ಲದೆ, ಕಸೌಲಿಗೆ ಅದೇ ಹೆದ್ದಾರಿಯಲ್ಲಿ ತೆರಳುವಾಗ ಇಲ್ಲದ ಟೋಲ್ ಶುಲ್ಕವನ್ನು ಮರಳಿ ಬರುವಾಗ ಮಾತ್ರ ಯಾಕೆ ಸ್ವೀಕರಿಸಲಾಯಿತು. ಇದು ತಪ್ಪು ನಡೆಯಲ್ಲವೇ ಎಂದು ಪ್ರಶ್ನೆ ಮಾಡಲಾಗಿತ್ತು.

ಗ್ರಾಹಕರದ ಆಯೋಗದ ಸದಸ್ಯರಾದ ಸುರ್ಜೀತ್ ಕೌರ್ ಮತ್ತು ಬ್ರಿಜ್ ಮೋಹನ್ ಮಹಿಳೆಯ ಅಹವಾಲನ್ನು ಮನ್ನಿಸಿ, ಹೆದ್ದಾರಿ ಪ್ರಾಧಿಕಾರಕ್ಕೆ ದಂಡ ವಿಧಿಸಿ ಆದೇಶ ಮಾಡಿದ್ದಾರೆ. ಟೋಲ್ ಪ್ಲಾಜಾದಲ್ಲಿ ಅಂಗವಿಕಲ ಮಹಿಳೆಯನ್ನು ಅವಮಾನಿಸಿದ್ದಾರೆ. ಭಾರತ ಸರಕಾರವು ಅಂಗವಿಕಲರಿಗೆ ತಮ್ಮ ವೈಕಲ್ಯದ ನೋವನ್ನು ನಿವಾರಿಸುವ ಸಲುವಾಗಿ ವಿಶೇಷ ಸೌಲಭ್ಯಗಳನ್ನು ಕೊಟ್ಟಿರುವಾಗ ಅದನ್ನು ನಿರಾಕರಿಸುವುದು ತಪ್ಪು. ಟೋಲ್ ಸಿಬಂದಿ ಶುಲ್ಕ ವಿಧಿಸುವುದು ಕಾನೂನು ರೀತ್ಯಾ ತಪ್ಪು ಮಾತ್ರವಲ್ಲದೆ, ಸರ್ಕಾರಿ ಸೇವೆಯನ್ನು ನಿರಾಕರಿಸಿದ್ದು ಮತ್ತೊಂದು ತಪ್ಪು. ಹೀಗಾಗಿ ಹೆದ್ದಾರಿ ಪ್ರಾಧಿಕಾರವು 40 ರೂ. ಶುಲ್ಕವನ್ನು ಹಿಂತಿರುಗಿಸುವುದರ ಜೊತೆಗೆ ಹತ್ತು ಸಾವಿರ ರೂ. ಪರಿಹಾರ, 7 ಸಾವಿರ ರೂ. ಕಾನೂನು ವ್ಯಾಜ್ಯದ ಬಾಬ್ತು ಮೊತ್ತವನ್ನು ಮಹಿಳೆಗೆ ನೀಡಬೇಕು ಎಂದು ಆದೇಶ ಮಾಡಿದ್ದಾರೆ.

The District Consumer Disputes Redressal Commission of Chandigarh has penalised the National Highways Authority of India (NHAI) for wrongly charging Rs 40 in toll tax and allegedly humiliating an orthopaedically disabled woman at the Chandimandir Toll Plaza. The Commission has directed NHAI to pay Rs 17,000 to the complainant.