Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ; ವಕ್ಫ್ ಕಾಯ್ದೆ ಸುಧಾರಣೆಗೆ ಅಡ್ಡಿಪಡಿಸಿದ ವಿಪಕ್ಷಗಳು, ಮೊಘಲ್ ಯುಗದ ಕಾನೂನುಗಳಿಗೆ ಅವಕಾಶ ನೀಡಲ್ಲ ಎಂದ ಅಮಿತ್ ಷಾ 

03-04-25 01:04 pm       HK News Staff   ದೇಶ - ವಿದೇಶ

ತೀವ್ರ ಚರ್ಚೆ ಮತ್ತು ವಿವಾದಕ್ಕೆ ಒಳಗಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಕಡೆಗೂ ಅಂಗೀಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನವೇ ವಕ್ಫ್​ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರೂ, ಸುದೀರ್ಘ 12 ಗಂಟೆಗಳ ಕಾಲ ಚರ್ಚೆ ನಡೆದು ಮಧ್ಯಾರಾತ್ರಿ 1.15ರ ಸುಮಾರಿಗೆ ಮಸೂದೆಯನ್ನು ಮತಕ್ಕೆ ಹಾಕಲಾಯಿತು.

ನವದೆಹಲಿ, ಎ.3: ತೀವ್ರ ಚರ್ಚೆ ಮತ್ತು ವಿವಾದಕ್ಕೆ ಒಳಗಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಕಡೆಗೂ ಅಂಗೀಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನವೇ ವಕ್ಫ್​ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರೂ, ಸುದೀರ್ಘ 12 ಗಂಟೆಗಳ ಕಾಲ ಚರ್ಚೆ ನಡೆದು ಮಧ್ಯಾರಾತ್ರಿ 1.15ರ ಸುಮಾರಿಗೆ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮಸೂದೆ ಪರವಾಗಿ 288 ಮತಗಳು, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ಇದರೊಂದಿಗೆ, ಲೋಕಸಭೆಯಲ್ಲಿ ಮಸೂದೆಗೆ ಒಪ್ಪಿಗೆ ಸಿಕ್ಕಂತಾಗಿದೆ. 

ಇದಕ್ಕು ಮುನ್ನ ಆಡಳಿತ ಎನ್ ಡಿಎ ಹಾಗೂ ವಿಪಕ್ಷಗಳ ಸಂಸದರ ನಡುವೆ ಬಿರುಸಿನ ಚರ್ಚೆಗಳು ನಡೆದವು. ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಸುದೀರ್ಘ ಚರ್ಚೆಯ ನಂತರ ಸಭಾಪತಿ ಓಂ ಬಿರ್ಲಾ ಮಧ್ಯರಾತ್ರಿ ವೇಳೆಗೆ ಮಸೂದೆಯನ್ನು ಮತದಾನಕ್ಕಿಟ್ಟರು. 

ಬುಧವಾರ ಬೆಳಗ್ಗೆ ಸಚಿವ ಕಿರಣ್ ರಿಜಿಜು ಅವರು ಮಸೂದೆ ಮಂಡಿಸುವುದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಮಾತನಾಡಿ, ವಕ್ಫ್ ಮಸೂದೆಯ ಮೂಲಕ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ವಕ್ಫ್ ಆಸ್ತಿಗಳ ನಿರ್ಹವಣೆಗೆ ಪಾರದರ್ಶಕ ಹಾಗೂ ಪರಿಣಾಮಕಾರಿ ವ್ಯವಸ್ಥೆ ತರುವುದು ತಿದ್ದುಪಡಿ ಮಸೂದೆ ಹಿಂದಿನ ಉದ್ದೇಶ ಎಂದು ಹೇಳಿದ್ದರು. 

ಎ.2ರಂದು ಲೋಕಸಭೆಯಲ್ಲಿ ಎರಡು ಮಸೂದೆಗಳು ಮಂಡನೆಯಾದವು. ಒಂದು, 1995ರ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ. ಮತ್ತೊಂದು, 1923ರ ಮುಸಲ್ಮಾನ್ ವಕ್ಫ್ ಕಾಯ್ದೆಯ ರದ್ದತಿ ಮಸೂದೆ. 1913ರಲ್ಲಿ Mussalman WLateaqf Validating Act ಅನ್ನು ಅಂದಿನ ಬ್ರಿಟಿಷ್ ಸರ್ಕಾರ ಸಿದ್ಧಪಡಿಸಿತ್ತು. 1923ರಲ್ಲಿ ಈ ಮಸೂದೆಯನ್ನು ಅಂಗೀಕಾರ ಮಾಡಲಾಯಿತು. ಭಾರತ ಸ್ವತಂತ್ರಗೊಂಡ ನಂತರ ಅದೇ ಹಳೆಯ ಕಾಯ್ದೆ ಅನುಸರಿಸಿ 1954ರಲ್ಲಿ ವಕ್ಫ್ ಕಾಯ್ದೆ ಅನುಷ್ಠಾನ ಮಾಡಲಾಗಿತ್ತು. ಅದರಲ್ಲೇ ರಾಜ್ಯಗಳ ವಕ್ಫ್ ಕಾಯ್ದೆಯನ್ನೂ ಸೇರಿಸಲಾಗಿತ್ತು. ಆನಂತರ, 1995ರಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ತಂದು ಮತ್ತಷ್ಟು ಬಲಿಷ್ಠ ಮಾಡಲಾಗಿತ್ತು. ಅದರ ಪ್ರಕಾರ ಯಾವುದೇ ಆಸ್ತಿಯನ್ನೂ ವಕ್ಪ್ ಆಸ್ತಿಯೆಂದು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ಅದೇ ಕಾಯ್ದೆಗೆ ತಿದ್ದುಪಡಿ ತಂದು ಕರಾಳ ಅಂಶಗಳನ್ನು ತೆಗೆದು ಹಾಕಲಾಗುತ್ತಿದೆ. 

ತಿದ್ದುಪಡಿ ಬಗ್ಗೆ ಸರ್ಕಾರದ ಸ್ಪಷ್ಟನೆ ಹೊರತಾಗಿಯೂ, ಮಸೂದೆ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದವು. ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳುವ, ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಹುನ್ನಾರ ಎಂದು ಆರೋಪಿಸಿದವು. ಜನರನ್ನು ವಿಭಜಿಸಿ ಆಳ್ವಿಕೆ ನಡೆಸುವ ಮಸೂದೆಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಪ್ರಮುಖ ವಿಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಡಿಎಂಕೆ, ಕಾಂಗ್ರೆಸ್ ಸಂಸದರು ವಿರೋಧಿಸಿದರು. 

ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ, ಪ್ರತಿಪಕ್ಷಗಳು ತುಷ್ಟೀಕರಣ ರಾಜಕೀಯದ ಅಡಿಯಲ್ಲಿ ಸರ್ಕಾರಿ ಆಸ್ತಿಯನ್ನು ಲೂಟಿ ಮಾಡಲು ವಕ್ಫ್ ಮಂಡಳಿಗೆ ಪರವಾನಗಿ ನೀಡುತ್ತಿವೆ ಎಂದು ಆರೋಪಿಸಿದರು. ಸ್ವತಂತ್ರ ಭಾರತದಲ್ಲಿ ಮೊಘಲ್ ಯುಗದ ವ್ಯವಸ್ಥೆ ಮತ್ತು ಕಾನೂನುಗಳಿಗೆ ಸ್ಥಾನ ನೀಡಲಾಗುವುದಿಲ್ಲ ಎಂದು ಹೇಳಿದರು. 

ಮುಸ್ಲಿಮರ ಧಾರ್ಮಿಕ ಚಟುವಟಿಕೆಗಳಿಗಾಗಿ ದೇಣಿಗೆಗಳ ಮೂಲಕ ರಚಿಸಲಾದ ಟ್ರಸ್ಟ್ ಆಗಿರುವ ವಕ್ಫ್‌ನಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದು ಅಮಿತ್ ಷಾ ಸ್ಪಷ್ಟನೆ ನೀಡಿದರು. ಅಲ್ಪಸಂಖ್ಯಾತ ಮತಬ್ಯಾಂಕ್‌ನಲ್ಲಿ ಭಯ ಹುಟ್ಟಿಸಲು, ಹೊಸ ಕಾಯ್ದೆಯು ಮುಸ್ಲಿಮರ ಧಾರ್ಮಿಕ ಆಚರಣೆಗಳು ಮತ್ತು ಅವರು ದಾನ ಮಾಡಿದ ಆಸ್ತಿಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ. ಯಾವುದೇ ಮುಸ್ಲಿಮೇತರರು ಟ್ರಸ್ಟ್ ನಲ್ಲಿ ಬರುವುದಿಲ್ಲ. ಇದರ ಬದಲಾಗಿ ಸಂವಿಧಾನದಲ್ಲಿ, ಆಸ್ತಿಯ ಮೇಲಿನ ಹಕ್ಕುಗಳು ಮತ್ತು ವಿವಾದಗಳನ್ನು ಇತ್ಯರ್ಥಪಡಿಸುವ ಹಕ್ಕು ಕಲೆಕ್ಟರ್‌ಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಕ್ಫ್ ಪ್ರಕರಣದಲ್ಲಿ ಆಸ್ತಿ ಹಕ್ಕು ರಕ್ಷಣೆಯಲ್ಲಿ ಜಿಲ್ಲಾಧಿಕಾರಿಗೆ ವಿನಾಯಿತಿ ಏಕೆ ಇರಬೇಕು ಎಂದು ಕೇಳಿದರು. ವಕ್ಫ್‌ ನಿಜವಾದ ಉದ್ದೇಶ ಈಡೇರಬೇಕು. ಎಲ್ಲಾ ವರ್ಗದ ಮುಸ್ಲಿಮರಿಗೂ ಪ್ರಯೋಜನಗಳು ಸಿಗಬೇಕು ಎಂದರು.

The Lok Sabha passed the Waqf (amendment) Bill well past midnight on Wednesday after a marathon 12-hour-long debate, with Home Minister Amit Shah categorically assuring the Muslim community that the new Bill does not interfere with their religious practices.