Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್ಬರು ಪುತ್ರರೊಂದಿಗೆ ಏಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹೆತ್ತವರು, ತಂದೆ, ತಾಯಿ, ಒಬ್ಬ ಪುತ್ರ ದುರಂತ ಸಾವು ! 

28-08-25 12:19 pm       HK News Desk   ದೇಶ - ವಿದೇಶ

ಬೆಳೆದು ನಿಂತ ಇಬ್ಬರು ಪುತ್ರರ ಜೊತೆಗೆ ತಂದೆ, ತಾಯಿ ಏಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಞಂಗಾಡ್ ಬಳಿಯ ಬೇಳೂರು ಪಂಚಾಯಿತಿ ವ್ಯಾಪ್ತಿಯ ಪಾರಕ್ಕಾಯಿ ಎಂಬಲ್ಲಿ ನಡೆದಿದ್ದು ಒಬ್ಬ ಪುತ್ರ ಮತ್ತು ಹೆತ್ತವರು ದುರಂತ ಸಾವಿಗೀಡಾಗಿದ್ದಾರೆ. 

ಕಾಸರಗೋಡು, ಆ.28 : ಬೆಳೆದು ನಿಂತ ಇಬ್ಬರು ಪುತ್ರರ ಜೊತೆಗೆ ತಂದೆ, ತಾಯಿ ಏಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಞಂಗಾಡ್ ಬಳಿಯ ಬೇಳೂರು ಪಂಚಾಯಿತಿ ವ್ಯಾಪ್ತಿಯ ಪಾರಕ್ಕಾಯಿ ಎಂಬಲ್ಲಿ ನಡೆದಿದ್ದು ಒಬ್ಬ ಪುತ್ರ ಮತ್ತು ಹೆತ್ತವರು ದುರಂತ ಸಾವಿಗೀಡಾಗಿದ್ದಾರೆ. 

ಗೋಪಿ ಮುಲವೇನಿವೀಡು (56), ಅವರ ಪತ್ನಿ ಕೆ.ವಿ.ಇಂದಿರಾ (54), ಹಿರಿಯ ಪುತ್ರ ರಂಜೇಶ್ (36) ಮೃತಪಟ್ಟಿದ್ದಾರೆ. ಇನ್ನೊಬ್ಬ ಪುತ್ರ ರಾಗೇಶ್ (35) ಗಂಭೀರ ಸ್ಥಿತಿಯಲ್ಲಿದ್ದು ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಇಂದು ನಸುಕಿನ 3.30 ಗಂಟೆ ವೇಳೆಗೆ ಘಟನೆ ನಡೆದಿದ್ದು ನಾಲ್ಕು ಗಂಟೆ ಹೊತ್ತಿಗೆ ಪಕ್ಕದ ಮನೆಯಲ್ಲಿರುವ ಮಾವ ನಾರಾಯಣನ್ ಅವರಿಗೆ ರಾಗೇಶ್ ಕರೆ ಮಾಡಿ, ತಂದೆ, ತಾಯಿ ನರಳುತ್ತಿರುವುದನ್ನು ನೋಡಲಾಗುತ್ತಿಲ್ಲ‌. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದ. ಕೂಡಲೇ ನಾರಾಯಣನ್ ಕುಟುಂಬಸ್ಥರು ಬಂದಿದ್ದು ಪಕ್ಕದ ಅಶೋಕನ್ ಎಂಬವರ ಜೀಪಿನಲ್ಲಿ ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಿ ಗೋಪಿ ಮೃತಪಟ್ಟಿದ್ದು ಉಳಿದವರು ಗಂಭೀರ ಸ್ಥಿತಿಯಲ್ಲಿದ್ದರು. ಅಲ್ಲಿನ ವೈದ್ಯರು ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಅಲ್ಲಿಂದ ಪೆರಿಯಾರಂ ತಲುಪಲು ಮತ್ತೆ ಒಂದು ಗಂಟೆಯಾಗಿದ್ದು ಅಷ್ಟರಲ್ಲಿ ಇಂದಿರಾ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಆರಂಭಿಸುವಷ್ಟರಲ್ಲಿ ರಂಜೇಶ್ ಕೂಡ ಮೃತಪಟ್ಟಿದ್ದಾರೆ ಎಂದು ಅಂಬಲತ್ತರ ಪೊಲೀಸರು ತಿಳಿಸಿದ್ದಾರೆ. 

ರಂಜೇಶ್ ಮತ್ತು ರಾಗೇಶ್ ಇಬ್ಬರೂ ಪಿಯುಸಿ ಓದಿದ ಬಳಿಕ ಗಲ್ಫ್ ತೆರಳಿ ಉದ್ಯೋಗದಲ್ಲಿದ್ದರು. ಐದು ವರ್ಷದ ಬಳಿಕ ಸರಿಯಾದ ಉದ್ಯೋಗ ಸಿಕ್ಕಿಲ್ಲವೆಂದು ಊರಿಗೆ ಮರಳಿದ್ದರು. ಈ ವೇಳೆ, ರಂಜೇಶ್ ಮದುವೆಯಾಗಿದ್ದರೂ ಅದು ಹೆಚ್ಚು ಕಾಲ ಇರಲಿಲ್ಲ. ಡೈವರ್ಸ್ ಆಗಿ ಸಂಬಂಧ ಕಡಿದು ಹೋಗಿತ್ತು. ಆನಂತರ, ಇಬ್ಬರೂ ಯುವಕರು ಸೇರಿಕೊಂಡು ಪಾರಕ್ಕಾಯಿ ಬಳಿಯಲ್ಲೇ ಗ್ರೋಸರಿ ಶಾಪ್ ಮಾಡಿದ್ದರು. ಎರಡು ವರ್ಷ ಅಂಗಡಿ ನಡೆಸಿದ ಬಳಿಕ ನಷ್ಟದಿಂದಾಗಿ ಕಟ್ಟಡದ ಮಾಲೀಕನಿಗೇ ಮಾರಾಟ ಮಾಡುವಂತಾಗಿತ್ತು. 

ಇಬ್ಬರು ಯುವಕರೂ ಶ್ರಮ ಜೀವಿಗಳಾಗಿದ್ದು ಯಾವುದೇ ಕೆಟ್ಟ ಚಟಗಳಿರಲಿಲ್ಲ. ಅಂಗಡಿ ಮಾರಿದ ಬಳಿಕ ಕಾಞಂಗಾಡಿನಲ್ಲಿ ಗ್ರೋಸರಿ ಶಾಪಲ್ಲಿ ಸೇಲ್ಸ್ ಮೆನ್ ಆಗಿ ದುಡಿಯುತ್ತಿದ್ದರು. ಮನೆಯವರೂ ಕೃಷಿಕರಾಗಿದ್ದು ಒಳ್ಳೆ ದುಡಿಮೆ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ರಬ್ಬರ್ ಮರಗಳನ್ನು ಕಿತ್ತು ತೆಗೆದು ಅಲ್ಲಿ ಅಡಿಕೆ ನೆಟ್ಟಿದ್ದರು. ಅಡಿಕೆ ಗಿಡಗಳನ್ನು ಪಂಚಾಯತಿನ ನರೇಗಾ ಕಾರ್ಯಕರ್ತರು ನೆಟ್ಟು ಸಹಕಾರ ನೀಡಿದ್ದರು. ಈಗ ರಬ್ಬರ್ ಪ್ರೊಸೆಸಿಂಗ್ ಮಾಡಲು ಬಳಸುವ ಏಸಿಡನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೇವಲ ಆರ್ಥಿಕ ಸಂಕಷ್ಟ ಸಾವಿಗೆ ಕಾರಣ ಎಂದು ತೋರುತ್ತಿಲ್ಲ. ಮನೆ ಮತ್ತು ಜಾಗವೂ ಇತ್ತು. ಅಷ್ಟು ತೊಂದರೆ ಇದ್ದರೆ ಅದನ್ನು ಮಾರಾಟ ಮಾಡಬಹುದಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಸಾವಿಗೇನು ಕಾರಣ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

In a heart-wrenching incident near Kanhangad, Kerala, a family of four reportedly attempted suicide by consuming acid, resulting in the deaths of the father, mother, and one son. The second son remains in critical condition at Periyaram Medical College.