ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ರೂ. ದರೋಡೆ, ಡ್ರೈವರ್ ಕೆಲಸದಿಂದ ತೆಗೆದಿದ್ದಕ್ಕೆ ರಿವೆಂಜ್ 

17-09-25 12:25 pm       Bangalore Correspondent   ಕ್ರೈಂ

ಫುಡ್ ಡೆಲಿವರಿ ನೆಪದಲ್ಲಿ ಬಂದು ವೃದ್ಧೆ ಕೈ-ಕಾಲು ಕಟ್ಟಿಹಾಕಿ ಮನೆಯಲ್ಲಿ 8 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

ಬೆಂಗಳೂರು, ಸೆ 17 : ಫುಡ್ ಡೆಲಿವರಿ ನೆಪದಲ್ಲಿ ಬಂದು ವೃದ್ಧೆ ಕೈ-ಕಾಲು ಕಟ್ಟಿಹಾಕಿ ಮನೆಯಲ್ಲಿ 8 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

ಆರೋಪಿಗಳು ಫುಡ್ ಡೆಲಿವರಿ ಇದೆ ಅಂತಾ ಬಾಗಿಲ ಬೆಲ್ ಮಾಡಿದ್ದಾರೆ. ಡೋರ್ ಓಪನ್ ಮಾಡುತ್ತಿದ್ದಂತೆ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ತಳ್ಳಿಕೊಂಡು ಒಳಗಡೆ ನುಗ್ಗಿದ್ದಾರೆ. ವೃದ್ಧೆಗೆ ಚಾಕು ತೋರಿಸಿ, ಕೈ-ಕಾಲು ಕಟ್ಟಿ ಹಾಕಿ ಎಂಟು ಲಕ್ಷ ದರೋಡೆ ಮಾಡಿದ್ದಾರೆ.

ಮನೆ ಡ್ರೈವರ್ ಕೆಲಸದಿಂದ ತೆಗೆದಿದ್ದಕ್ಕೆ ಈ ಕೃತ್ಯ ಎಸಗಿರೋದು ಬೆಳಕಿಗೆ ಬಂದಿದೆ. ವೃದ್ಧೆ ಕನಕಪುಷ್ಪ ಎಂಬವರ ಮಗ ರಾಹುಲ್ ಬಳಿ ಮಡಿವಾಳ ಎಂಬಾತ ನಾಲ್ಕು ತಿಂಗಳಿನಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಆತನ ಸಂಬಳ ಕ್ಲಿಯರ್ ಮಾಡಿ ಡ್ರೈವರ್ ಕೆಲಸದಿಂದ ತೆಗೆದು ಕಳುಹಿಸಿದ್ದರು. ಇದರಿಂದ ಕೋಪಗೊಂಡ ಮಡಿವಾಳ, ವೃದ್ಧೆಯ ಮಗ ಹೊರಗೆ ಹೋಗೋದನ್ನೆ ಕಾದಿದ್ದ.

ರಾಹುಲ್ ಹೊರಗೆ ಹೋಗ್ತಿದ್ದಂತೆ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಬಳಿ ಬಂದಿದ್ದ. ಡೆಲಿವರಿ ಬಾಯ್ ಅಂತಾ ಡೋರ್ ಬೆಲ್ ಮಾಡಿದ್ದಾರೆ. ಮೊದಲಿಗೆ ವೃದ್ಧೆ ಬಾಗಿಲು ತೆರೆಯುವುದಿಲ್ಲ. ನಾವು ಯಾವುದೇ ಆರ್ಡರ್ ಮಾಡಿಲ್ಲ ಅಂತ ಹೇಳುತ್ತಾರೆ. ಈ ವೇಳೆ ನಿಮ್ಮ ಮಗ ರಾಹುಲ್ ಅನ್ನೋರು ಆರ್ಡರ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಮಡಿವಾಳ ಸೇರಿ ನಾಲ್ವರು ಮನೆ ಒಳಗೆ ನುಗ್ಗಿದ್ದಾರೆ. ವೃದ್ಧೆ ಕನಕಪುಷ್ಪ ಕೈ-ಕಾಲು ಕಟ್ಟಿ ಕುತ್ತಿಗೆಗೆ ಚಾಕು ಇರಿದಿದ್ದಾರೆ. ನಂತರ ಎಂಟು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.

ಸದ್ಯ ವೃದ್ಧೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a shocking incident in Banashankari, Bengaluru, an elderly woman was tied up and robbed of rs 8 lakh by her former driver and his accomplices, who posed as food delivery agents to gain entry into her house.