ಫಾಸ್ಟ್ ಟ್ಯಾಗ್ ಕಡ್ಡಾಯ ಗಡುವು ಫೆ.15ಕ್ಕೆ ಮುಂದೂಡಿಕೆ

31-12-20 06:01 pm       Headline Karnataka News Network   ದೇಶ - ವಿದೇಶ

ಜನವರಿ ಒಂದರಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಫೆ.15ರ ವರೆಗೆ ಮುಂದೂಡಲಾಗಿದೆ.

ನವದೆಹಲಿ, ಡಿ.31: ಜನವರಿ ಒಂದರಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಫೆ.15ರ ವರೆಗೆ ಮುಂದೂಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ನಾಲ್ಕು ಚಕ್ರದ ವಾಹನಗಳು ಜನವರಿ 1ರಿಂದ ಫಾಸ್ಟ್ ಟ್ಯಾಗ್ ಇಲ್ಲದೆ ಸಂಚರಿಸುವಂತಿಲ್ಲ ಎಂದು ಕೇಂದ್ರ ಭೂಸಾರಿಗೆ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು.

ಆದರೆ, ಇನ್ನೂ ಬಹುತೇಕ ವಾಹನಗಳು ಫಾಸ್ಟ್ ಟ್ಯಾಗ್ ಮಾಡಿಸಿಕೊಳ್ಳದ ಕಾರಣ ಮತ್ತೆ ಈ ಆದೇಶವನ್ನು ಮುಂದೂಡಲಾಗಿದೆ. 2021ರ ಜನವರಿ ಬಳಿಕ ಪೂರ್ತಿಯಾಗಿ ಫಾಸ್ಟ್ ಟ್ಯಾಗ್ ಮೂಲಕವೇ ವಾಹನಗಳು ಸಂಚಾರ ನಡೆಸಬೇಕು. ಇದರಿಂದ ಸಮಯ ಮತ್ತು ಇಂಧನ ಉಳಿತಾಯ ಆಗಲಿದೆ ಎಂದು ಸಾರಿಗೆ ಸಚಿವಾಲಯ ಹೇಳಿಕೊಂಡಿತ್ತು.

2017ರ ಡಿಸೆಂಬರ್ ಬಳಿಕ ಬಂದಿರುವ ವಾಹನಗಳು ಫಾಸ್ಟ್ ಟ್ಯಾಗ್ ಇದ್ದುಕೊಂಡೇ ರಸ್ತೆಗಿಳಿದಿದ್ದವು. ಆದರೆ, ಇದಕ್ಕಿಂತ ಹಿಂದಿನ ಹಳೆಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಇರಲಿಲ್ಲ. ಕಳೆದ ನವೆಂಬರ್ ನಲ್ಲಿ ಸಾರಿಗೆ ಸಚಿವಾಲಯ ಈ ಬಗ್ಗೆ ಸುತ್ತೋಲೆ ಹೊರಡಿಸಿ ಎಲ್ಲ ರೀತಿಯ ಹಳೆಯ ವಾಹನಗಳು ಕೂಡ ಜನವರಿ ಮೊದಲು ಫಾಸ್ಟ್ ಟ್ಯಾಗ್ ಮಾಡಿಸಿಕೊಳ್ಳಬೇಕೆಂದು ಗಡುವು ವಿಧಿಸಿತ್ತು.

ಫಾಸ್ಟ್ ಟ್ಯಾಗ್ ಅಳವಡಿಕೆ ಬಳಿಕ ಶುಲ್ಕ ಸಂಗ್ರಹ ಹೆಚ್ಚಿತ್ತು. ಅಲ್ಲದೆ, ನಿಖರ ಮಾಹಿತಿಗಳು ಸಿಗುತ್ತಿದ್ದವು. ಇದೇ ಡಿಸೆಂಬರ್ ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಶುಲ್ಕ ಸಂಗ್ರಹ ಫಾಸ್ಟ್ ಟ್ಯಾಗ್ ಮೂಲಕ ಆಗಿತ್ತು. ಡಿ.24ರಂದು ಒಂದೇ ದಿನ 80 ಲಕ್ಷ ಶುಲ್ಕ ಫಾಸ್ಟ್ ಟ್ಯಾಗ್ ನಲ್ಲಿ ಬಂದಿದೆ ಎಂದು ಸಚಿವಾಲಯ ಹೇಳಿತ್ತು.