ಮಗುವಿಗೆ ಹುಷಾರಿಲ್ಲವೆಂದು ಬೆಂಗಳೂರು ವಿಮಾನವನ್ನು ಅರ್ಧದಲ್ಲೇ ಇಳಿಸಿದ ಪೈಲಟ್ !

31-12-20 06:21 pm       Headline Karnataka News Network   ದೇಶ - ವಿದೇಶ

ಮಗುವಿನ ಆರೋಗ್ಯ ಹದಗೆಡುತ್ತಿರುವ ವಿಷಯ ತಿಳಿದು ವಿಮಾನವನ್ನು ತುರ್ತಾಗಿ ಮಧ್ಯಪ್ರದೇಶದ ಇಂಧೋರ್ ನಲ್ಲಿ ಲ್ಯಾಂಡ್ ಮಾಡಿದ ಘಟನೆ ನಡೆದಿದೆ.

ನವದೆಹಲಿ, ಡಿ.31: ಮಗುವಿನ ಆರೋಗ್ಯ ಹದಗೆಡುತ್ತಿರುವ ವಿಷಯ ತಿಳಿದು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ತುರ್ತಾಗಿ ಮಧ್ಯಪ್ರದೇಶದ ಇಂಧೋರ್ ನಲ್ಲಿ ಲ್ಯಾಂಡ್ ಮಾಡಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಗೋರಖ್ ಪುರದ ದುರ್ಗೇಶ್ ಜೈಸ್ವಾಲ್ ಮತ್ತು ಅನು ಜೈಸ್ವಾಲ್ ದಂಪತಿಯ ಮಗು ದೇವ್ ಜೈಸ್ವಾಲ್ ಗೆ ತೀವ್ರ ಅನಾರೋಗ್ಯ ಕಾಡಿತ್ತು. ಬೆಂಗಳೂರಿನ ವೈದ್ಯರನ್ನು ಸಂಪರ್ಕಿಸಿದಾಗ, ತುರ್ತಾಗಿ ಕರೆತರುವಂತೆ ತಿಳಿಸಿದ್ದರು. ಹೀಗಾಗಿ ಮಗುವನ್ನು ತುರ್ತು ಚಿಕಿತ್ಸೆಗಾಗಿ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ವಿಮಾನದಲ್ಲಿ ಬರುತ್ತಿದ್ದಾಗಲೇ, ಮಗುವಿಗೆ ಆರೋಗ್ಯ ಹದಗೆಟ್ಟಿದ್ದು, ವಿಮಾನದ ಸಿಬಂದಿಗೆ ಹೆತ್ತವರು ತಿಳಿಸಿದ್ದಾರೆ. ಕೂಡಲೇ ಪೈಲಟ್, ಮಧ್ಯಪ್ರದೇಶದ ಇಂದೋರ್ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ, ತುರ್ತಾಗಿ ವಿಮಾನವನ್ನು ಇಳಿಸುವ ಕಾರ್ಯ ಮಾಡಿದ್ದಾರೆ.

ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮಗುವನ್ನು ಕೂಡಲೇ ಅಲ್ಲಿನ ಸ್ಯಾಮ್ಸ್ ಆಸ್ಪತ್ರೆಗೆ ಒಯ್ಯುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ಮಗು ಅಲ್ಲಿ ತಲುಪುವಷ್ಟರಲ್ಲಿ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಐದು ವರ್ಷದ ಮಗುವಿಗೆ ಮೆದುಳಿನಲ್ಲಿ ನೀರು ಒಸರುವ ಜಲಮಸ್ತಿಷ್ಕ ಎನ್ನುವ ರೋಗ ತಗಲಿತ್ತು.

ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಮಗುವನ್ನು ಉಳಿಸುವುದಕ್ಕಾಗಿಯೇ ಇಂದೋರ್ ನಲ್ಲಿ ತುರ್ತಾಗಿ ಇಳಿಸಿದರೂ ಮಗುವನ್ನು ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗಲಿಲ್ಲ.