ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂತಾರ ನಟನ ಹೆಸರು! ಆರೋಪಿಗಳ ಜೊತೆಗೆ ನಿಕಟ ನಂಟು, ಎಸ್ಐಟಿ ತನಿಖೆಗೆ ಸಾಕ್ಷಿಯಾಗ್ತಾರಾ ನಟ ಜಯರಾಮ್? 

30-01-26 03:38 pm       HK News Desk   ದೇಶ - ವಿದೇಶ

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಮಹತ್ವದ ಹೆಜ್ಜೆ ಇಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಮಲಯಾಳಂ ನಟ ಜಯರಾಮ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ತನಿಖಾ ಅಧಿಕಾರಿಗಳು ಚೆನ್ನೈಯಲ್ಲಿರುವ ಜಯರಾಮ್ ನಿವಾಸಕ್ಕೆ ತೆರಳಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ತಿರುವನಂತಪುರಂ / ಚೆನ್ನೈ, ಜ‌.30 : ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಮಹತ್ವದ ಹೆಜ್ಜೆ ಇಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಮಲಯಾಳಂ ನಟ ಜಯರಾಮ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ತನಿಖಾ ಅಧಿಕಾರಿಗಳು ಚೆನ್ನೈಯಲ್ಲಿರುವ ಜಯರಾಮ್ ನಿವಾಸಕ್ಕೆ ತೆರಳಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಜೊತೆಗಿನ ತಮ್ಮ ಸಂಬಂಧದ ಕುರಿತು ಜಯರಾಮ್ ಸ್ಪಷ್ಟನೆ ನೀಡಿದ್ದು, “ಶಬರಿಮಲೆಯಲ್ಲಿ ಪೊಟ್ಟಿಯವರನ್ನು ಪರಿಚಯ ಮಾಡಿಕೊಂಡೆ. ಅವರು ಆಗಾಗ ನನ್ನ ಮನೆಯ ಪೂಜಾ ಕಾರ್ಯಕ್ರಮಗಳಿಗೆ ಬರುತ್ತಿದ್ದರು” ಎಂದು ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, “ಚಿನ್ನದ ಕಳ್ಳತನ ಅಥವಾ ಯಾವುದೇ ರೀತಿಯ ಮೋಸದ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಜಯರಾಮ್ ಸ್ಪಷ್ಟಪಡಿಸಿದ್ದಾರೆ.

ಕಟಿಲಪಾಳಿ ಸ್ಮಾರ್ಟ್ ಕ್ರಿಯೇಷನ್ಸ್‌ನಲ್ಲಿ ನಡೆದ ಪೂಜಾ ಕಾರ್ಯಕ್ರಮ ಹಾಗೂ ಕೊಟ್ಟಯಂ ಇಳಂಪಳ್ಳಿ ದೇವಸ್ಥಾನದ ದ್ವಾರ ಘೋಷಯಾತ್ರೆಯಲ್ಲಿ ಉಣ್ಣಿಕೃಷ್ಣನ್ ಪೊಟ್ಟಿಯವರ ಆಹ್ವಾನದ ಮೇರೆಗೆ ಭಾಗವಹಿಸಿದ್ದೇನೆ ಎಂದು ಜಯರಾಮ್ ಹೇಳಿದ್ದಾರೆ. ಇದೇ ವೇಳೆ, ಚಿನ್ನದ ವ್ಯಾಪಾರಿ ಗೋವರ್ಧನ್ ಕೂಡ ಪರಿಚಯವಾಗಿತ್ತು ಎಂದು ಅವರು ತನಿಖಾ ತಂಡಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಯರಾಮ್ ಅವರನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಬಳಸುವ ಬಗ್ಗೆ ಎಸ್ಐಟಿ ಚಿಂತನೆ ನಡೆಸುತ್ತಿದೆ.

ತನಿಖೆಯ ಪ್ರಕಾರ, ಶಬರಿಮಲೆಯ ದ್ವಾರಪಾಲಕ ಶಿಲ್ಪಗಳಲ್ಲಿ ಅಳವಡಿಸಲು ದೇವಸ್ವಂ ಬೋರ್ಡ್ ಉಣ್ಣಿಕೃಷ್ಣನ್ ಪೊಟ್ಟಿಗೆ ಒಪ್ಪಿಸಿದ್ದ 14 ಚಿನ್ನದ ಗಟ್ಟಿಗಳನ್ನು 2019ರಲ್ಲಿ ಜಯರಾಮ್ ಅವರ ಮನೆಗೆ ತಂದು ವಿಶೇಷ ಪೂಜೆ ನಡೆಸಲಾಗಿದೆ. ಈ ಚಿನ್ನದ ಗಟ್ಟಿಗಳಿಗೆ ಚೆನ್ನೈಯಲ್ಲಿ ಚಿನ್ನದ ಲೇಪನ ಮಾಡಲಾಗಿದ್ದು, ಶಬರಿಮಲೆಯ ದ್ವಾರಪಾಲಕ ಶಿಲ್ಪಗಳ ರೂಪದಲ್ಲಿ ಜಯರಾಮ್ ಅವರ ಮನೆಯಲ್ಲಿ ಪೂಜಿಸಲಾಗಿದೆ ಎಂದು ಎಸ್ಐಟಿ ತನಿಖೆಯಲ್ಲಿ ಪತ್ತೆ ಮಾಡಿದೆ. ದೇವಸ್ವಂ ಬೋರ್ಡ್ ಅನುಮತಿ ಮೇರೆಗೆ ಪೊಟ್ಟಿಯವರ ಬಳಿ ಇದ್ದ ಚಿನ್ನವನ್ನು ಖಾಸಗಿ ಪೂಜಾ ಕಾರ್ಯಕ್ರಮಗಳಿಗೆ ಬಳಸಲಾಗಿದೆ ಎನ್ನುವುದು ತನಿಖೆಯ ಪ್ರಮುಖ ಅಂಶವಾಗಿದೆ.

ಚಾರ್ಜ್‌ಶೀಟ್ ವಿಳಂಬದ ಆರೋಪ 

ಇದೇ ವೇಳೆ, ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಲ್ಲಿ SIT ಗಂಭೀರ ವಿಳಂಬ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಬಂಧಿತ 12 ಆರೋಪಿಗಳಲ್ಲಿ 9 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸರ್ಕಾರದ ಪ್ರಾಸಿಕ್ಯೂಷನ್ ಅನುಮತಿ ಅಗತ್ಯವಿದ್ದು, ಇದುವರೆಗೆ ಆ ಅನುಮತಿ ಕೇಳಲಾಗಿಲ್ಲ ಎನ್ನಲಾಗಿದೆ. ಈ ವಿಳಂಬವನ್ನು ಆಧಾರವಾಗಿಸಿ ಎನ್. ವಾಸು ಸೇರಿದಂತೆ ಕೆಲವು ಆರೋಪಿಗಳು ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನಿಖಾ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಆರೋಪಿಗಳಿಗೆ ಲಾಭವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

The Special Investigation Team probing the Sabarimala gold theft case has recorded the statement of Malayalam actor Jayaram, who acted in Kantara. Investigators questioned him at his Chennai residence over his alleged links with key accused Unnikrishnan Potti. While Jayaram denied any knowledge of the theft, the SIT is considering examining him as a witness amid allegations of misuse of temple gold and delays in filing the charge sheet.