ಇಡೀ ದೇಶದಲ್ಲಿ ಕೋವಿಡ್ ಲಸಿಕೆ ಉಚಿತ ವಿತರಣೆ ; ಆರೋಗ್ಯ ಸಚಿವ

02-01-21 04:11 pm       Headline Karnataka News Network   ದೇಶ - ವಿದೇಶ

ಕೋವಿಡ್ 19 ವಿರೋಧಿ ಲಸಿಕೆಯನ್ನು ಇಡೀ ದೇಶದಲ್ಲಿ ಜನರಿಗೆ ಉಚಿತವಾಗಿಯೇ ವಿತರಣೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ನವದೆಹಲಿ, ಜ.2: ಕೋವಿಡ್ 19 ವಿರೋಧಿ ಲಸಿಕೆಯನ್ನು ದೆಹಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಜನರಿಗೆ ಉಚಿತವಾಗಿಯೇ ವಿತರಣೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಕೋವಿಡ್ ಲಸಿಕೆ ನೀಡುವ ಅಣಕು ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ಬಂದಿದ್ದ ಆರೋಗ್ಯ ಸಚಿವರನ್ನು ಪ್ರಶ್ನೆ  ಮಾಡಿದ ಸುದ್ದಿಗಾರರಿಗೆ ಈ ಮಾತನ್ನು ಹೇಳಿದ್ದಾರೆ. ಕೋವಿಡ್ ಲಸಿಕೆಯನ್ನು ಸಾಮಾನ್ಯ ಜನರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಹರ್ಷವರ್ಧನ್ ಉತ್ತರಿಸಿದ್ದಾರೆ.

ಆರಂಭದಲ್ಲಿ ಒಂದು ಕೋಟಿ ಆರೋಗ್ಯ ಕಾರ್ಯಕರ್ತು ಮತ್ತು ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಎರಡು ಕೋಟಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಯೋಜನೆ ಹಾಕಲಾಗಿದೆ. ಆಬಳಿಕ 27 ಕೋಟಿ ಮಂದಿ ಆದ್ಯತಾ ವಲಯದಲ್ಲಿರುವ ಮಂದಿಗೆ ಲಸಿಕೆ ವಿತರಿಸಲಾಗುವುದು. ಜುಲೈ ಮೊದಲು ಈ ಗುರಿಯನ್ನು ತಲುಪಬೇಕೆಂಬ ನೆಲೆಯಲ್ಲಿ ಫಲಾನುಭವಿಗಳಿಗೆ ಲಸಿಕೆ ವಿತರಿಸಲು ಯೋಜನೆ ತಯಾರಿಸಲಾಗಿದೆ ಎಂದು ಹೇಳಿದರು.

ಕೋವಿಡ್ ಲಸಿಕೆ ನೀಡುವ ಸಿದ್ಧತೆ ವಿಚಾರದಲ್ಲಿ ದೇಶಾದ್ಯಂತ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗ ಮತ್ತು ಕಲಬುರ್ಗಿಯಲ್ಲಿ ಪೂರ್ವಾಭ್ಯಾಸ ಕೈಗೊಳ್ಳಲಾಗಿದೆ.