ರೂಪಾಂತರಿ ವೈರಸ್ ಆತಂಕದ ಮಧ್ಯೆ ಬ್ರಿಟನ್ ವಿಮಾನ ಆರಂಭ ; ಮೊದಲ ವಿಮಾನದಲ್ಲಿ ಬಂದ್ರು 246 ಜನ

08-01-21 02:37 pm       Headline Karnataka News Network   ದೇಶ - ವಿದೇಶ

ಬ್ರಿಟನ್‍ನಿಂದ ವಿಮಾನ ಆಗಮಿಸಿದ್ದು ಏರ್ ಇಂಡಿಯಾದಲ್ಲಿ 246 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ತಂದಿದೆ. 

ನವದೆಹಲಿ, ಜ.8 : ರೂಪಾಂತರಿ ಕೊರೋನಾ ವೈರಸ್ ಆತಂಕದ ಮಧ್ಯೆಯೇ ಬ್ರಿಟನ್‍ನಿಂದ ವಿಮಾನ ಆಗಮಿಸಿದ್ದು ಏರ್ ಇಂಡಿಯಾದಲ್ಲಿ 246 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ತಂದಿದೆ. 

ಹೊಸ ವೈರಸ್ ಕಾಣಿಸಿಕೊಂಡ ಬೆನ್ನಿಗೆ ಕೇಂದ್ರ ಸರಕಾರವು ಡಿಸೆಂಬರ್ 23 ರಂದು ಬ್ರಿಟನ್‍ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ಡಿ.31ರ ತನಕ, ಆ ನಂತರ ಜ.6ರ ತನಕ ನಿರ್ಬಂಧಿಸಿತ್ತು. ಈಗಾಗಲೇ ಬ್ರಿಟನ್ ನಿಂದ ಬಂದವರಿಗೆ ಕಾಣಿಸಿಕೊಂಡಿರುವ ರೂಪಾಂತರಿ ವೈರಸ್ ಪ್ರಕರಣಗಳ ಸಂಖ್ಯೆ ದೇಶದಲ್ಲಿ 82ಕ್ಕೇರಿದ್ದು ಇದರ ನಡುವಲ್ಲೇ ಜ.7ರಿಂದ ಮತ್ತೆ ಭಾರತ- ಬ್ರಿಟನ್ ನಡುವಿನ ವಿಮಾನ ಸಂಚಾರ ಆರಂಭಿಸಲಾಗಿದೆ. 

ಪ್ರತಿವಾರ 30 ವಿಮಾನಗಳು ಕಾರ್ಯಾಚರಿಸಲಿದ್ದು ಭಾರತ ಹಾಗೂ ಬ್ರಿಟನ್ ನಿಂದ ತಲಾ 15 ವಿಮಾನಗಳು ವಿನಿಮಯ ಆಗಲಿವೆ. ಜನವರಿ 23ರ ತನಕ ವಿಮಾನ ಹಾರಾಟಕ್ಕೆ ಮಿತಿ ಹೇರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. 

ಬ್ರಿಟನ್ ನಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಬ್ರಿಟನ್‍ನಿಂದ ಬರುವ- ಅಲ್ಲಿಗೆ ಹೋಗುವ ವಿಮಾನಗಳಿಗೆ ಕನಿಷ್ಠ ಜನವರಿ 31ರ ತನಕ ನಿಷೇಧ ಮುಂದುವರಿಸಬೇಕೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಕೇಂದ್ರ ಸರಕಾರವನ್ನು ವಿನಂತಿಸಿದ್ದಾರೆ. 

ಇಂಥ ಸಂಕಷ್ಟದ ಸಮಯದಲ್ಲಿ ಸರಕಾರ ಯಾಕೆ ಬ್ರಿಟನ್ ವಿಮಾನಕ್ಕೆ ಅವಕಾಶ ಕೊಡಬೇಕು. ಇದರಿಂದ ಜನರನ್ನು ಅಪಾಯಕ್ಕೆ ಒಡ್ಡಿದಂತಾಗಲ್ಲವೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. 

ಬ್ರಿಟನ್ ನಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. ಅಲ್ಲದೆ, ನೆಗೆಟಿವ್ ಆಗಿದ್ದರೂ ಇಲ್ಲಿ ಬಂದ ಮೇಲೆ 14 ದಿನ ಕ್ವಾರಂಟೈನ್ ಇರಬೇಕು ಎಂದು ಹೊಸ ಮಾರ್ಗಸೂಚಿ ನೀಡಲಾಗಿದೆ.

An Air India flight from UK has landed in Delhi with 246 passengers on board amid concerns about a mutant fast-spreading strain of the coronavirus that emerged in Britain.