ಇಂಡೋನೇಶ್ಯಾದಲ್ಲಿ ಮತ್ತೊಂದು ವಿಮಾನ ಪತನ ಶಂಕೆ !

09-01-21 06:36 pm       Headline Karnataka News Network   ದೇಶ - ವಿದೇಶ

ಏರ್ ಶ್ರೀವಿಜಯ ಎನ್ನುವ ವಿಮಾನ ದಿಢೀರ್ ನಾಪತ್ತೆಯಾಗಿದ್ದು, ಸಮುದ್ರ ಮಧ್ಯೆ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.

ಜಕಾರ್ತಾ, ಜ.9: ಇಂಡೋನೇಶ್ಯಾ ರಾಜಧಾನಿ ಜಕಾರ್ತಾದಿಂದ ಹೊರಟಿದ್ದ ಏರ್ ಶ್ರೀವಿಜಯ ಎನ್ನುವ ವಿಮಾನ ದಿಢೀರ್ ನಾಪತ್ತೆಯಾಗಿದ್ದು, ಸಮುದ್ರ ಮಧ್ಯೆ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.

ಜಕಾರ್ತಾ ವಿಮಾನ ನಿಲ್ದಾಣದಿಂದ ಹೊರಟಿದ್ದ ಬೋಯಿಂಗ್ 737 ವಿಮಾನದಲ್ಲಿ 62 ಮಂದಿ ಪ್ಯಾಸೆಂಜರ್ ಇದ್ದರು. ಆಗಸಕ್ಕೆ ಹಾರಿದ ನಾಲ್ಕು ನಿಮಿಷದಲ್ಲೇ ರಾಡಾರ್ ಸಂಪರ್ಕ ಕಡಿದುಕೊಂಡಿದೆ. ಅಲ್ಲದೆ, ಸಂಪರ್ಕ ಕಡಿದುಕೊಂಡ ಸಂದರ್ಭದಲ್ಲಿ ವಿಮಾನವು 11 ಸಾವಿರ ಅಡಿ ಎತ್ತರದಲ್ಲಿತ್ತು ಎಂದು ಅಲ್ಲಿನ ವಿಮಾನ ಸಚಿವಾಲಯ ತಿಳಿಸಿದೆ.

ಇದೇ ವೇಳೆ, ಇಂಡೋನೇಶ್ಯಾ ದ್ವೀಪ ಸಮೂಹದ ಉತ್ತರ ಭಾಗದಲ್ಲಿ ವಿಮಾನ ಪತನ ಆಗಿರುವ ಬಗ್ಗೆ ಅಲ್ಲಿನ ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ರಕ್ಷಣಾ ತಂಡ ಅಲ್ಲಿ ಧಾವಿಸಿದೆ. ಆದರೆ, ಅದು ಜಕಾರ್ತಾದಿಂದ ಹೊರಟ ವಿಮಾನವೇ ಅನ್ನೋದನ್ನು ಇನ್ನೂ ಖಚಿತಪಡಿಸಿಲ್ಲ.

11 ಸಾವಿರ ಅಡಿ ಎತ್ತರಕ್ಕೇರಿದ್ದ ವಿಮಾನ ಹಠಾತ್ತಾಗಿ 250 ಅಡಿ ಎತ್ತರಕ್ಕೆ ಬಂದಿರುವ ಬಗ್ಗೆ ರಾಡಾರ್ ಮಾಹಿತಿ ರವಾನಿಸಿತ್ತು ಎನ್ನಲಾಗುತ್ತಿದೆ. ಆನಂತರ ವಿಮಾನದ ಸಂಪರ್ಕ ಕಡಿದುಕೊಂಡಿದೆ ಎನ್ನಲಾಗುತ್ತಿದೆ.

2018ರಲ್ಲಿ ಇದೇ ರೀತಿ ಇಂಡೋನೇಶ್ಯಾದ ಜಕಾರ್ತಾದಲ್ಲಿ ಬೋಯಿಂಗ್ ವಿಮಾನ ಪತನವಾಗಿದ್ದು 189 ಮಂದಿ ಪ್ರಾಣ ಕಳಕೊಂಡಿದ್ದ ಘಟನೆ ನಡೆದಿತ್ತು.