ರೈತರ ಪ್ರತಿಭಟನೆ ನಿರ್ವಹಣೆಗೆ ಕೇಂದ್ರ ವಿಫಲ ; ಮೂರು ಕೃಷಿ ಕಾಯ್ದೆಗಳಿಗೆ ಸುಪ್ರೀಂ ತಡೆ

12-01-21 03:08 pm       Headline Karnataka News Network   ದೇಶ - ವಿದೇಶ

 ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಮೂರು ವಿವಾದಾಸ್ಪದ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆ ಹಾಕಿದೆ.

ನವದೆಹಲಿ, ಜ.12: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಮೂರು ವಿವಾದಾಸ್ಪದ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆ ಹಾಕಿದೆ. ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ನಿರ್ವಹಿಸಲು ಕೇಂದ್ರ ಸರಕಾರ ವಿಫಲವಾಗಿರುವ ಬಗ್ಗೆ ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್, ಕಾಯ್ದೆಗಳ ಬಗ್ಗೆ ರೈತರ ಜೊತೆ ಚರ್ಚಿಸಲು ತಜ್ಞರನ್ನು ಒಳಗೊಂಡ ಕಮಿಟಿಯೊಂದನ್ನು ನೇಮಕ ಮಾಡುವುದಾಗಿ ಹೇಳಿದೆ.

ರೈತರು ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ, ಕೇಂದ್ರ ಸರಕಾರ ರೈತರ ಪ್ರತಿಭಟನೆಯನ್ನು ನಿಭಾಯಿಸುತ್ತಿರುವ ರೀತಿ ತುಂಬ ನಿರಾಶದಾಯಕ ಬೆಳವಣಿಗೆಯಾಗಿ ಕಾಣುತ್ತಿದೆ. ಆದರೆ, ಈ ಬಗ್ಗೆ ನಾವೇನು ಮಾಡೋಕ್ಕಾಗುವುದಿಲ್ಲ. ನಾವು ಆರ್ಥಿಕ ತಜ್ಞರೂ ಅಲ್ಲ. ಸರಕಾರ ಜಾರಿಗೆ ತರುತ್ತಿರುವ ಕಾಯ್ದೆಗಳಿಂದ ರೈತರಿಗೆ ಲಾಭದಾಯಕ ಆಗಲಿದೆ ಎನ್ನುವ ಬಗ್ಗೆ ಯಾವುದೇ ಪುರಾವೆಯನ್ನು ಹಾಜರುಪಡಿಸಿಲ್ಲ. ಇದು ಅತ್ಯಂತ ಕಠಿಣ ಸನ್ನಿವೇಶ. ಕೇಂದ್ರ ಸರಕಾರವೇ ಕಾಯ್ದೆಗಳಿಗೆ ತಡೆ ಹೇರುವ ನಿರ್ಧಾರ ಪ್ರಕಟಿಸಬೇಕಿತ್ತು. ಕೇಂದ್ರ ಸರಕಾರ ರೈತರನ್ನು ಮನವೊಲಿಸಲು ಅಥವಾ ಪ್ರತಿಭಟನೆ ತಣಿಸಲು ಮುಂದಾಗದಿರುವುದು ದುರದೃಷ್ಟಕರ. ಹೀಗಾಗಿ ನಾವು ಈ ಮೂರು ಕಾಯ್ದೆಗಳಿಗೆ ಮುಂದಿನ ತೀರ್ಪು ನೀಡುವ ವರೆಗೂ ತಡೆ ಹೇರಿ ಆದೇಶ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದಕ್ಕೂ ಮುನ್ನ ಸರಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್, ರೈತರನ್ನು ತಪ್ಪು ದಾರಿಗೆ ಎಳೆಯಲಾಗಿದೆ. ತಪ್ಪು ನೀತಿಗಳನ್ನು ತಲೆಗೆ ತುಂಬಿ ಪ್ರತಿಭಟನೆಗೆ ಇಳಿಸಲಾಗಿದೆ. ಅಲ್ಲದೆ, ಈ ಪ್ರತಿಭಟನೆಯ ಹಿಂದೆ ಖಲಿಸ್ತಾನ್ ಉಗ್ರರ ಕೈವಾಡ ಇದೆ ಎಂದು ಹೇಳಿದರು. ಖಲಿಸ್ತಾನ್ ಉಗ್ರರ ಕೈವಾಡದ ಬಗ್ಗೆ ಉಲ್ಲೇಖ ಮಾಡಿದ್ದಕ್ಕಾಗಿ ಕೋರ್ಟ್, ಕಾಯ್ದೆಗೆ ತಡೆ ನೀಡುವ ತೀರ್ಪಿನ ಜೊತೆ ದೇಶದ ಭದ್ರತಾ ವಿಚಾರದಲ್ಲಿ ಸರಕಾರ ಅಫಿಡವಿಟ್ ನೀಡಬೇಕೆಂದು ಸೂಚನೆ ನೀಡಿದೆ.  

ವಿವಿಧ ರೈತ ಸಂಘಟನೆಗಳ ಪರವಾಗಿ ಸುಪ್ರೀಂ ಕೋರ್ಟಿಗೆ ಹಾಜರಾಗಿದ್ದ ವಕೀಲರು, ನ್ಯಾಯಾಧೀಶರ ತೀರ್ಪಿನ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಇದು ದೇಶದ ರೈತರಿಗೆ ಸಂದ ಜಯ. ಹಲವು ಸಂಘಟನೆಗಳಿದ್ದರೂ, ರೈತರು ಮಾತ್ರ ಒಂದೇ. ರೈತ ಸಂಘಟನೆಗಳು ಪ್ರತಿಭಟನೆಯನ್ನು ಮುಂದುವರಿಸುತ್ತಾರೋ, ಇಲ್ಲವೋ ಎನ್ನುವ ಬಗ್ಗೆ ತೀರ್ಪನ್ನು ನೋಡಿ ನಿರ್ಧರಿಸಲಿವೆ ಎಂದಿದ್ದಾರೆ.

ಈ ನಡುವೆ, ರೈತ ಸಂಘಟನೆಗಳು ರೈತರ ಪ್ರತಿಭಟನೆ ಮುಂದುವರಿಯಲಿದೆ. ಅಲ್ಲದೆ, ಗಣರಾಜ್ಯ ದಿವಸ ರೈತರು ಟ್ರಾಕ್ಟರ್ ಜೊತೆಗೆ ಪ್ರತಿಭಟನಾ ಮಾರ್ಚ್ ನಡೆಸಲಿದ್ದಾರೆ ಎಂದು ಹೇಳಿವೆ.

ಇದೇ ವೇಳೆ, ಸುಪ್ರೀಂ ಕೋರ್ಟ್ ಕಾಯ್ದೆ ಬಗ್ಗೆ ರೈತರ ಜೊತೆ ಸಮಾಲೋಚನೆಗೆ ತಜ್ಞರ ತಂಡವನ್ನು ನೇಮಕ ಮಾಡಿದೆ. ತಂಡದಲ್ಲಿ ಅಂತಾರಾಷ್ಟ್ರೀಯ ಪಾಲಿಸಿ ಹೆಡ್ ಡಾ.ಪ್ರಮೋದ್ ಕುಮಾರ್ ಜೋಷಿ, ಕೃಷಿ ಆರ್ಥಿಕ ತಜ್ಞ ಅಶೋಕ್ ಗುಲಾಟಿ, ಮಹಾರಾಷ್ಟ್ರದ ಶಿವಖೇರಿ ಸಂಘಟನಾದ ಅನಿಲ್ ಧನವತ್, ಭೂಪಿಂದರ್ ಸಿಂಗ್ ಮನ್ ಅವರನ್ನು ನೇಮಕ ಮಾಡಿದೆ.