ಫೇಸ್ ಮಾಸ್ಕ್ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ

14-01-21 02:44 pm       Headline Karnataka News Network   ದೇಶ - ವಿದೇಶ

ಫೇಸ್ ಮಾಸ್ಕ್ ಧರಿಸುವುದರಿಂದ ಕರೋನಾ ವೈರಸ್ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಕರೋನಾ ವೈರಸ್ ಸಮಸ್ಯೆ ಆರಂಭವಾದಾಗಿನಿಂದ ಭಾರತವೂ ಸೇರಿದಂತೆ ಪ್ರಪಂಚದ ಜನರ ಜೀವನಶೈಲಿಯೇ ಹಲವಾರು ವಿಷಯಗಳಲ್ಲಿ ಬದಲಾಗಿದೆ. ಅದರಲ್ಲೂ ಹಲವು ದೇಶಗಳಲ್ಲಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಫೇಸ್ ಮಾಸ್ಕ್ ಧರಿಸುವುದರಿಂದ ಕರೋನಾ ವೈರಸ್ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಜನರು ಈಗ ಫೇಸ್ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕವಾಗಿ ಫೇಸ್ ಮಾಸ್ಕ್ ಧರಿಸುವ ಅಗತ್ಯದ ಬಗ್ಗೆ ಸರ್ಕಾರವು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸದವರಿಗೆ ಪೊಲೀಸರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಪ್ರಯಾಣಿಸುವವರಿಗೂ ಸಹ ಫೇಸ್ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಆದರೆ ವಾಹನಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವೇ ಅಥವಾ ಕಡ್ಡಾಯವಲ್ಲವೇ ಎಂಬ ಬಗ್ಗೆ ಗೊಂದಲ ಮೊದಲಿನಿಂದಲೂ ಮುಂದುವರೆದಿದೆ.

ಈ ಗೊಂದಲದ ನಡುವೆಯೇ ವಾಹನಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಫೇಸ್ ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ವಕೀಲ ಸೌರಭ್ ಶರ್ಮಾ ಅವರಿಗೆ 2020ರ ಸೆಪ್ಟೆಂಬರ್ 9ರಂದು ದೆಹಲಿ ಪೊಲೀಸರು ರೂ.500ಗಳ ದಂಡ ವಿಧಿಸಿದ್ದರು

ಆ ದಿನ ಸೌರಭ್ ಶರ್ಮಾ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು. ಆದರೆ ಫೇಸ್ ಮಾಸ್ಕ್ ಧರಿಸದ ಕಾರಣಕ್ಕೆ ಪೊಲೀಸರು ಅವರಿಗೆ ದಂಡ ವಿಧಿಸಿದ್ದಾರೆ. ತಾವು ಪಾವತಿಸಿರುವ ದಂಡವನ್ನು ಮರುಪಾವತಿ ಮಾಡುವಂತೆ ಕೋರಿ ಸೌರಭ್ ಶರ್ಮಾ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಸೌರಭ್ ಶರ್ಮಾ ಅವರು ತಮಗೆ ತೊಂದರೆಯಾದ ಕಾರಣಕ್ಕೆ ರೂ.10 ಲಕ್ಷಗಳ ಪರಿಹಾರವನ್ನು ಕೋರಿದ್ದಾರೆ. ಈ ಪ್ರಕರಣವು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಈ ಪ್ರಕರಣದಲ್ಲಿ ದೆಹಲಿ ಸರ್ಕಾರವು ಅಫಿಡವಿಟ್ ಸಲ್ಲಿಸಿದೆ.

ವಾಹನದಲ್ಲಿ ಪ್ರಯಾಣಿಸುವವರು ಯಾರೇ ಆಗಲಿ ಫೇಸ್ ಮಾಸ್ಕ್ ಧರಿಸಬೇಕು ಎಂದು ದೆಹಲಿ ಸರ್ಕಾರವು ತನ್ನ ಅಫಿಡವಿಟ್'ನಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೆಹಲಿ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಮೂಲಕ ತನ್ನ ಅಭಿಪ್ರಾಯವನ್ನು ತಿಳಿಸಿದೆ.

ವಾಹನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವಂತೆ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲವೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಅಫಿಡವಿಟ್'ನಲ್ಲಿ ತಿಳಿಸಿದೆ.

ವಾಹನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಫೇಸ್ ಮಾಸ್ಕ್ ಧರಿಸಬೇಕೆ ಬೇಡವೇ ಎಂಬ ಗೊಂದಲ ಉಂಟಾಗಿರುವ ನಡುವೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಅಫಿಡವಿಟ್ ಮಹತ್ವವನ್ನು ಪಡೆದುಕೊಂಡಿದೆ.

This News Article is a Copy of Drive Spark