ಕಾಂಗ್ರೆಸ್ ಹೈಡ್ರಾಮಕ್ಕೆ ತೆರೆ: ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಸೋನಿಯಾ

24-08-20 09:12 pm       Headline Karnataka News Network   ದೇಶ - ವಿದೇಶ

ಪಕ್ಷದೊಳಗಿನ ಅಸಮಾಧಾನದ ಹೈಡ್ರಾಮಗಳಿಗೆ ತೆರೆ ಬಿದ್ದಿದ್ದು, ಸೋನಿಯಾ ಗಾಂಧಿಯವರು ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.

ಹೊಸದಿಲ್ಲಿ , ಆಗಸ್ಟ್ 24: ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು, ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಹಿರಿಯ ನಾಯಕರ ಪತ್ರ, ಇಂದು ಕಾರ್ಯಕಾರಿ ಸಭೆಯಲ್ಲಿ ನಡೆದ ಬೆಳವಣಿಗೆಗಳು, ಪಕ್ಷದೊಳಗಿನ ಅಸಮಾಧಾನದ ಹೈಡ್ರಾಮಗಳಿಗೆ ತೆರೆ ಬಿದ್ದಿದ್ದು, ಸೋನಿಯಾ ಗಾಂಧಿಯವರು ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.

ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಸೋನಿಯಾ ಗಾಂಧಿಯವರಿಗೆ 20ಕ್ಕೂ ಹೆಚ್ಚು ಹಿರಿಯ ನಾಯಕರು ಪತ್ರ ಬರೆದ ಬಳಿಕ ಇಂದು ಕಾರ್ಯಕಾರಿ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿಯವರು ಈ ಪತ್ರ ಬಿಜೆಪಿ ಪ್ರೇರಿತ ಎಂದು ಹೇಳಿದ್ದರು ಎಂದು ವರದಿಯಾಗಿದ್ದು, ಇದು ಪಕ್ಷದೊಳಗೆ ಭಾರೀ ಅಸಮಾಧಾನವನ್ನು ಸೃಷ್ಟಿಸಿತು.  ಈ ಬಗ್ಗೆ ಹಿರಿಯ ನಾಯಕರಾದ ಕಪಿಲ್ ಸಿಬಲ್ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಗುಲಾಂ ನಬಿ ಆಝಾದ್ ‘ಬಿಜೆಪಿ ಪ್ರೇರಿತ’ ಎಂದು ಸಾಬೀತಾದರೆ ತಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.

ಆದರೆ ರಾಹುಲ್ ಇಂತಹ ಹೇಳಿಕೆ ನೀಡಿದ್ದಾರೆ ಎನ್ನುವುದು ಸುಳ್ಳೆಂದು ರಣದೀಪ್ ಸುರ್ಜೆವಾಲಾ ಸ್ಪಷ್ಟಪಡಿಸಿದರು. ನಂತರ ಕಪಿಲ್ ಸಿಬಲ್ ಟ್ವೀಟ್ ಮಾಡಿ ಸ್ವತಃ ರಾಹುಲ್ ಗಾಂಧಿಯವರೇ ಕರೆ ಮಾಡಿ ತಾನು ಆ ರೀತಿಯ ಹೇಳಿಕೆ ನೀಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು ಎಂದು ಹೇಳಿದರು. ನಂತರ ತನ್ನ ಹಳೆಯ ಟ್ವೀಟನ್ನು ಅಳಿಸಿ ಹಾಕಿದರು.

ಈ ಎಲ್ಲಾ ಬದಲಾವಣೆ ಬಳಿಕ ಇದೀಗ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರೇ ಮುಂದುವರಿಯಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.