ಬೆಂಗಳೂರು ಐಸಿಸ್​ ಶಂಕಿತ ವೈದ್ಯನ​ ಸ್ನೇಹಿತರು ಎನ್​ಐಎ ವಶಕ್ಕೆ

26-08-20 11:56 am       Headline Karnataka News Network   ದೇಶ - ವಿದೇಶ

ಐಸಿಸ್​ ಸಂಘಟನೆ ಜೊತೆ ನಂಟು ಹೊಂದಿದ್ದಾನೆ ಎನ್ನಲಾಗಿರುವ ವೈದ್ಯ ಅಬ್ದುರ್ ರೆಹಮಾನ್ ಜೊತೆಗೂಡಿ ಹಲವು ಚಟುವಟಿಕೆಗಳಲ್ಲಿ ಭಾಗಿ‌ಯಾಗಿರುವ ಅನುಮಾನದಿಂದ ಅಬ್ದುರ್ ರೆಹಮಾನ್ ಸ್ನೇಹಿತರ ಪಾತ್ರದ ಬಗ್ಗೆ ಸಾಕ್ಷ್ಯ ಸಂಗ್ರಹಕ್ಕೆ ಎನ್ಐಎ ಅಧಿಕಾರಿಗಳು ಮುಂದಾಗಿದ್ದಾರೆ.

ಬೆಂಗಳೂರು (ಆ. 26): ಐಸಿಸ್ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಬೆಂಗಳೂರಿನ ವೈದ್ಯ ಡಾ. ಅಬ್ದುರ್ ರೆಹಮಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಸ್ನೇಹಿತರನ್ನು ಎನ್ಐಎ ವಶಕ್ಕೆ ಪಡೆದಿದೆ. ವಶಕ್ಕೆ ಪಡೆದು, ಕಳೆದ ನಾಲ್ಕು ದಿನಗಳಿಂದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಅಬ್ದುರ್ ರೆಹಮಾನ್ ಸ್ನೇಹಿತರನ್ನು ಎನ್ಐಎ ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ವೈದ್ಯ ಅಬ್ದುರ್ ರೆಹಮಾನ್ ಜೊತೆಗೂಡಿ ಹಲವು ಚಟುವಟಿಕೆಗಳಲ್ಲಿ ಭಾಗಿ‌ಯಾಗಿರುವ ಅನುಮಾನದಿಂದ ಅಬ್ದುರ್ ರೆಹಮಾನ್ ಸ್ನೇಹಿತರ ಪಾತ್ರದ ಬಗ್ಗೆ ಸಾಕ್ಷ್ಯ ಸಂಗ್ರಹಕ್ಕೆ ಎನ್ಐಎ ಅಧಿಕಾರಿಗಳು ಮುಂದಾಗಿದ್ದಾರೆ.

ಬಸವನಗುಡಿಯ ಎಂಡಿ ಬ್ಲಾಕ್ ನಿವಾಸಿ ಅಬ್ದುರ್‌ ರೆಹಮಾನ್ ಎಂಬಾತನನ್ನು ಐಸಿಸ್​ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು. ಬಸವನಗುಡಿಯಲ್ಲಿ ಆತ ನೆಲೆಸಿದ್ದ ಅಪಾರ್ಟ್​ಮೆಂಟ್ ಮೇಲೆ ದಾಳಿ ನಡೆಸಿದ ದೆಹಲಿ ಎನ್ಐಎ ಅಧಿಕಾರಿಗಳು ಮನೆಯಲ್ಲಿ ಶೋಧ ನಡೆಸಿ ಆತನನ್ನು ಬಂಧಿಸಿದ್ದರು. ಬಂಧಿತ ಶಂಕಿತ ಉಗ್ರ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಆಪ್ತೋಲ್ಮಾಲಜಿಸ್ಟ್ ನಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗೆ ಮೆರಿಟ್ ನಲ್ಲಿ ಉತ್ತೀರ್ಣನಾಗಿದ್ದ. ಆದರೆ, ಆರೋಪಿ  ನಿಷೇಧಿತ ಇಸ್ಲಾಮಿಕ್‌ ಸ್ಟೇಟ್ ಕೊರೋಸನ್ ಪ್ರೋವಿನ್ಸ್ (ISKP) ಎಂಬ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಬಾಂಗ್ಲಾದೇಶ ಮೂಲದ ನಿಷೇಧಿತ ಇಸ್ಲಾಮಿಕ್‌ ಸ್ಟೇಟ್ ಕೊರೋಸನ್ ಪ್ರೋವಿನ್ಸ್ ಸಂಘಟನೆಯ ಸದಸ್ಯನಾಗಿದ್ದ ಈತ ತಿಹಾರ್ ಜೈಲಿನಲ್ಲಿ ಅಬ್ದುಲ್ ಬಸೀತ್ ಎಂಬ ಉಗ್ರ ಹಾಗೂ ಪೂನಾ ಮೂಲದ ಸಾದಿಯಾ ಅನ್ವರ್, ನಬೀಲ್ ಸಿದ್ದಿಕಿ ಖತ್ರಿ ಜೊತೆ ಸಂಪರ್ಕ ಹೊಂದಿದ್ದ. ಈ‌ ಮೂವರು ಶಂಕಿತರು ಐಸಿಸ್ ನಂಟು ಹೊಂದಿದ್ದು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಭಾರತ ಮತ್ತು ಇತರ ದೇಶಗಳಲ್ಲಿ ಸಿಎಎ ಪ್ರತಿಭಟನೆ ವೇಳೆ ಗಲಭೆ ಸಂಚು ರೂಪಿಸಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾಗಿ ಅಬ್ದುರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. 2014ರಲ್ಲಿ ಸಿರಿಯಾದ ಐಸಿಸ್ ಕ್ಯಾಂಪ್ ಗೆ ಭೇಟಿ ಕೊಟ್ಟಿದ್ದ ಈತ 10 ದಿನಗಳ ಕಾಲ ಸಿರಿಯಾದ ಐಸಿಸ್ ಕ್ಯಾಂಪ್ ನಲ್ಲಿ ಉಳಿದಿದ್ದ. ಈ ವೇಳೆ ಐಸಿಸ್ ಕ್ಯಾಂಪ್ ನಲ್ಲಿ ಗಾಯಗೊಂಡ ಉಗ್ರರಿಗೆ ಚಿಕಿತ್ಸೆ ನೀಡುವ ಕೆಲಸ‌ ಮಾಡುತ್ತಿದ್ದ.