ಈ ವರ್ಷ ಹೆಚ್ಚಿನ ಜಿಎಸ್​ಟಿ ಪರಿಹಾರ ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

27-08-20 09:47 pm       Headline Karnataka News Network   ದೇಶ - ವಿದೇಶ

ಕೊರೋನಾ ವೈರಸ್ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಎಸ್​ಟಿ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬಿದ್ದಿದ್ದು, ರಾಜ್ಯಗಳಿಗೆ ಹೆಚ್ಚಿನ ಜಿಎಸ್​ಟಿ ಪರಿಹಾರ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ತಿಳಿಸಿದ್ದಾರೆ.

ನವದೆಹಲಿ, ಆಗಸ್ಟ್ 27: ಕೊರೋನಾ ವೈರಸ್ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಎಸ್​ಟಿ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬಿದ್ದಿದ್ದು, ರಾಜ್ಯಗಳಿಗೆ ಹೆಚ್ಚಿನ ಜಿಎಸ್​ಟಿ ಪರಿಹಾರ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ತಿಳಿಸಿದ್ದಾರೆ. ಇಂದು ಆನ್​ಲೈನ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 41ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.

2019-20ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಈಗಾಗಲೇ 1.65 ಲಕ್ಷ ಕೋಟಿಗೂ ಹೆಚ್ಚು ಜಿಎಸ್​ಟಿ ಪರಿಹಾರ ಹಣ ನೀಡಲಾಗಿದೆ. 97 ಸಾವಿರ ಕೋಟಿ ರೂ ಪರಿಹಾರ ಹಣದ ಕೊರತೆ ಬೀಳುವ ಅಂದಾಜು ಇದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕೇಂದ್ರ ಸರ್ಕಾರದ ಪ್ರಕಾರ ಈ ವರ್ಷ ಜಿಎಸ್​ಟಿ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ಕೊರತೆ ಬೀಳುತ್ತಿದೆ. ಜಿಎಸ್​ಟಿ ಸಂಗ್ರಹದಲ್ಲಿ ವ್ಯತ್ಯವಾದರೆ ಸರ್ಕಾರವೇ ಭರ್ತಿ ಮಾಡಬೇಕೆಂದು ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಈ ಸಂದರ್ಭದಲ್ಲಿ ಒತ್ತಾಯಿಸಿದವು. ಆದರೆ, ಬಿಕ್ಕಟ್ಟಿನಿಂದ ಜಿಎಸ್​ಟಿ ಸಂಗ್ರಹಕ್ಕೆ ಧಕ್ಕೆಯಾಗಿದ್ದರೆ ರಾಜ್ಯಗಳಿಗೆ ಪೂರ್ಣ ಜಿಎಸ್​ಟಿ ಪಾಲು ಕೊಡಬೇಕೆಂಬ ನಿಯಮ ಇಲ್ಲವೆಂದು ಕೇಂದ್ರ ಸರ್ಕಾರ ಕಾನೂನು ಉಲ್ಲೇಖಿಸಿ ಸಭೆಯಲ್ಲಿ ಸ್ಪಷ್ಟಪಡಿಸಿತು.

ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಜಿಎಸ್​ಟಿ ಸಭೆಯಲ್ಲಿ ಆದಾಯ ಕೊರತೆ ನೀಗಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು. ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದ್ದರೆ ರಾಜ್ಯ ಸರ್ಕಾರಗಳು ಹಣವನ್ನು ಸಾಲವಾಗಿ ಪಡೆಯಬಹುದು, ಸೆಸ್ ಮೊದಲಾದ ತೆರಿಗೆ ದರ ಏರಿಸಿ ಆದಾಯ ಮಾಡಬಹುದು ಎಂಬಿತ್ಯಾದಿ ಸಲಹೆಗಳು ಕೆಲ ರಾಜ್ಯಗಳಿಂದ ವ್ಯಕ್ತವಾದವು.