ಹೆಚ್ಚುವರಿ ಹಣ ಪಡೆಯುವ ಅಂಗಡಿ ಮಾಲಿಕರೆ ಎಚ್ಚರ……ಎಚ್ಚರ!!

28-08-20 01:15 pm       Dhruthi Anchan - Correspondant   ದೇಶ - ವಿದೇಶ

ಫ್ಯಾಮಿಲಿ ಪ್ಯಾಕ್ ಐಸ್‌ಕ್ರೀಮ್‌ಗೆ ಗ್ರಾಹಕರೊಬ್ಬರ ಬಳಿ ದರಕ್ಕಿಂತ ೧೦ ರೂ.ಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿದ್ದಕ್ಕಾಗಿ ಜಿಲ್ಲಾ ಗ್ರಾಹಕ ವೇದಿಕೆ ೨ ಲಕ್ಷ ರೂ. ದಂಡ ವಿಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. 

ಮುಂಬೈ, ಆಗಸ್ಟ್ 27: ಫ್ಯಾಮಿಲಿ ಪ್ಯಾಕ್ ಐಸ್‌ಕ್ರೀಮ್‌ಗೆ ಗ್ರಾಹಕರೊಬ್ಬರ ಬಳಿ ದರಕ್ಕಿಂತ  ೧೦ ರೂ.ಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿದ್ದಕ್ಕಾಗಿ ಮುಂಬೈನ ಸೆಂಟ್ರಲ್ ಶಗುನ್ ವೆಜ್ ರೆಸ್ಟೋರೆಂಟ್‌ಗೆ ಜಿಲ್ಲಾ ಗ್ರಾಹಕ ವೇದಿಕೆ ೨ ಲಕ್ಷ ರೂ. ದಂಡ ವಿಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. 

ಆರು ವರ್ಷಗಳ ಹಿಂದೆ ಅಂಗಡಿ ಮಾಲಿಕರು ಗ್ರಾಹಕನ ಬಳಿಯಲ್ಲಿ ಎಂ ಆರ್ ಪಿ ರೇಟ್ ೧೬೫ ರೂ. ಗಳ ಬದಲು ೧೭೫ ರೂ.ಗಳನ್ನು ಪಡೆದಿತ್ತು. ಈ ಕುರಿತು ರೆಸ್ಟೋರೆಂಟ್‌ರವರ ಬಳಿ ವಿಚಾರಿಸಿದಾಗ, ಐಸ್‌ಕ್ರೀಮ್ ತೆಗೆದಿಡಲು ವೆಚ್ಚ ತಗಲುವುದಲ್ಲದೆ, ಅಂಗಡಿ ಹಾಗೂ ರೆಸ್ಟೋರೆಂಟ್ ನಡುವೆ ವ್ಯತ್ಯಾಸ ಇದೆಯೆಂದು ಹೇಳಿತ್ತು. ಆದರೆ ಗ್ರಾಹಕ ತಾವು ಹೋಟೆಲ್‌ನ ಬೇರೆ ಯಾವುದೇ ಸೇವೆಯಾಗಲಿ ಅಥವಾ ಅಲ್ಲಿನ ವಸ್ತುವನ್ನಾಗಲಿ ಬಳಸಿಲ್ಲ. ಕೌಂಟರ್‌ನಿಂದಲೆ ಐಸ್ ಕ್ರೀಂ ತೆಗೆದುಕೊಂಡು ಹೋಗಿದ್ದಾಗಿ ದೂರಿನಲ್ಲಿ ಹೇಳಿದ್ದರು. 

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ಜಾಧವ್ ಎಂಬುವವರು ದೂರುದಾರರಾಗಿದ್ದು, ಇವರು ಜೂನ್ ೮,೨೦೧೪ ರಂದು ಡಿಬಿ ಮಾರ್ಗ್ ಪೊಲೀಸ್ ಠಾಣೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಮನೆಯಲ್ಲಿದ್ದ ಅತಿಥಿಗಳಿಗೆಂದು ಐಸ್ ಕ್ರೀಂ ಖರೀದಿಸಲು ರೆಸ್ಟೋರೆಂಟ್‌ಗೆ  ಹೋಗಿದ್ದಾಗಿ ಹಾಗೂ ತಮಗೆ ಒಂದರ ಬೆಲೆಗೆ ಎರಡು ಫ್ಯಾಮಿಲಿ ಪ್ಯಾಕ್ ದೊರೆತಿದ್ದರೂ ದರ ಹಾಗೂ ಹೆಚ್ಚುವರಿ ಬಿಲ್ ನೋಡಿ ಆಘಾತವಾಯಿತು ಎಂದು ದೂರಿನಲ್ಲಿ ಹೇಳಿದ್ದರು.

ಇವುಗಳನ್ನೆಲ್ಲಾ ಪರಿಶೀಲಿಸಿದ ಗ್ರಾಹಕ ವೇದಿಕೆ ಹೆಚ್ಚುವರಿ ದರ ವಿಧಿಸಿದ್ದು ಸರಿಯಲ್ಲ ಎಂದು ರೆಸ್ಟೋರೆಂಟ್‌ಗೆ ದಂಡ ವಿಧಿಸಿದೆ.