ಜಪಾನ್ ಪ್ರಧಾನಿ ಸ್ಥಾನಕ್ಕೆ ಶಿಂಜೋ ಅಬೆ ರಾಜಿನಾಮೆ!! 

28-08-20 02:09 pm       Dhruthi Anchan - Correspondant   ದೇಶ - ವಿದೇಶ

ಜಪಾನ್‌ನ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರು ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ ತಮ್ಮ ರಾಜೀನಾಮೆಯನ್ನು ಪ್ರಕಟಿಸಲಿದ್ದಾರೆ.

ಟೋಕಿಯೊ, ಆಗಸ್ಟ್ 28: ಜಪಾನ್‌ನ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರು ಶುಕ್ರವಾರ ತಮ್ಮ ರಾಜೀನಾಮೆಯನ್ನು ಪ್ರಕಟಿಸಲಿದ್ದಾರೆ ಎಂದು ಸಾರ್ವಜನಿಕ ಪ್ರಸಾರಕರಾದ ಎನ್‌ಎಚ್‌ಕೆ ತಿಳಿಸಿದೆ. 

ಒಂದು ವಾರದ ಅವಧಿಯಲ್ಲಿ ಎರಡು ಆಸ್ಪತ್ರೆ ಭೇಟಿಗಳನ್ನು ಮಾಡಿದ ನಂತರ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 

ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಅಧಿಕಾರಿಗಳು ಈ ಹಿಂದೆ ಅಬೆ ಅವರ ಅವಧಿಯನ್ನು ಪೂರೈಸಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದರು. ಇವರ ಅವಧಿ ಸೆಪ್ಟೆಂಬರ್ 2021 ರಲ್ಲಿ ಕೊನೆಗೊಳ್ಳಬೇಕಿತ್ತು ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಎನ್ಎಚ್ ಕೆ ತಿಳಿಸಿದೆ. 

ಅಬೆ ಅವರ ಹಣಕಾಸು ಮಂತ್ರಿ ಟಾರೊ ಅಸೊ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ, ಆದರೆ ಅಬೆ ಅವರ ರಾಜೀನಾಮೆ ಎಲ್ಡಿಪಿಯಲ್ಲಿ ನಾಯಕತ್ವ ಸ್ಪರ್ಧೆಯನ್ನು ಹುಟ್ಟುಹಾಕುವುದು ಬಹುತೇಕ ಖಚಿತವಾಗಿದೆ.

ಅಬೆ ಅವರ ಆಸ್ಪತ್ರೆಯ ಭೇಟಿ ಸುಮಾರು ಎಂಟು ಗಂಟೆಗಳ ಕಾಲ ನಡೆದಿದ್ದು , ಅಬೆ ಅವರು ಅಲ್ಸರೇಟಿವ್ ಕೊಲೈಟಿಸ್‌ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.