ಫೇಸ್ಬುಕ್, ಟ್ವಿಟರ್, ವಾಟ್ಸಪ್ಪಿಗೆ ನಿಷೇಧದ ತೂಗುಗತ್ತಿ ; ಹೊಸ ಐಟಿ ನಿಯಮಕ್ಕೆ ಒಗ್ಗಿಕೊಳ್ಳದ ಜಾಲತಾಣಗಳು !

25-05-21 10:12 pm       Headline Karnataka News Network   ದೇಶ - ವಿದೇಶ

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸೋಶಿಯಲ್ ಮೀಡಿಯಾ ತಾಣಗಳಾದ ಫೇಸ್ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್, ವಾಟ್ಸಪ್ ನಿಷೇಧದ ತೂಗುಗತ್ತಿ ಎದುರಿಸುತ್ತಿದೆ.

ನವದೆಹಲಿ, ಮೇ 25: ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸೋಶಿಯಲ್ ಮೀಡಿಯಾ ತಾಣಗಳಾದ ಫೇಸ್ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್, ವಾಟ್ಸಪ್ ನಿಷೇಧದ ತೂಗುಗತ್ತಿ ಎದುರಿಸುತ್ತಿದೆ. ಭಾರತ ಸರಕಾರ ವಿಧಿಸಿದ್ದ ಹೊಸ ಮಾರ್ಗಸೂಚಿಗೆ ಇನ್ನೂ ಒಗ್ಗಿಕೊಳ್ಳದ ಈ ಜಾಲತಾಣಗಳಿಗೆ ಸರಕಾರದಿಂದ ಮೇ 25ರ ಗಡುವು ವಿಧಿಸಲಾಗಿತ್ತು. ಆದರೆ, ಗಡುವು ಮುಗಿಯುತ್ತಾ ಬಂದರೂ, ಇವು ಇನ್ನೂ ಮಾರ್ಗಸೂಚಿ ಅಳವಡಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿಲ್ಲ.

ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದ್ದು ಅದನ್ನು ಮೂರು ತಿಂಗಳ ಒಳಗೆ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಭಾರತದ ಟ್ವಿಟರ್ ತಾಣ KOO ಮಾತ್ರ ಹೊಸ ರೀತಿಯ ಗೈಡ್ ಲೈನ್ಸ್ ಒಪ್ಪಿಕೊಂಡು ತನ್ನಲ್ಲಿ ಅಳವಡಿಸಿದ್ದು ಬಿಟ್ಟರೆ ವಿದೇಶಿ ಮೂಲದ ಯಾವುದೇ ಜಾಲತಾಣಗಳು ಹೊಸ ಕಾನೂನನ್ನು ಪಾಲನೆ ಮಾಡಲು ಮುಂದಾಗಿಲ್ಲ.

ಗಡುವಿನ ಒಳಗೆ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಅಂಥ ಪ್ಲಾಟ್ ಫಾರ್ಮ್ ಗಳು ಭಾರತದಲ್ಲಿ ತಮ್ಮ ಅಸ್ತಿತ್ವ ಕಳಕೊಳ್ಳಲಿದೆ. ಅದರ ಜೊತೆಗೆ, ಕ್ರಿಮಿನಲ್ ರೀತಿಯ ಕ್ರಮ ಎದುರಿಸಬೇಕು ಎನ್ನುವ ಸೂಚನೆಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ನೀಡಲಾಗಿತ್ತು. ಆದರೆ, ಅಮೆರಿಕ ಮೂಲದ ಜಾಲತಾಣಗಳು ಹೊಸ ಕಾನೂನಿಗೆ ಒಗ್ಗಿಕೊಳ್ಳಲು ಆರು ತಿಂಗಳ ಸಮಯ ಬೇಕೆಂದು ಸರಕಾರದಲ್ಲಿ ಕೇಳಿಕೊಂಡಿದೆ.

ಹೊಸ ರೀತಿಯ ಐಟಿ ನಿಯಮದ ಪ್ರಕಾರ, ಜಾಲತಾಣದ ಕಂಪನಿಗಳು ಭಾರತದಲ್ಲಿ ನಿರ್ವಹಣೆ ನೋಡಿಕೊಳ್ಳಲು ಮತ್ತು ಜಾಲತಾಣದ ಮೇಲೆ ನಿಗಾ ಇಡುವಲ್ಲಿ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು. ಆಯಾ ಜಾಲತಾಣಗಳಲ್ಲಿ ಬರುವ ವಿಚಾರಗಳು, ದೂರುಗಳನ್ನು ನೋಡಿಕೊಂಡು ಆಕ್ಷೇಪಾರ್ಹ ಇದ್ದಲ್ಲಿ ಅವನ್ನು ತೆರವುಗೊಳಿಸಬೇಕು. ಈ ರೀತಿಯ ನಿಮಯ ಕೇವಲ ಜಾಲತಾಣಗಳಿಗೆ ಮಾತ್ರವಲ್ಲ, ಹೊಸತಾಗಿ ಅಸ್ತಿತ್ವಕ್ಕೆ ಬಂದಿರುವ ಒಟಿಟಿ ಪ್ಲಾಟ್ ಫಾರ್ಮ್ ಗಳಿಗೂ ಅನ್ವಯ ಆಗಲಿದೆ.

ನೆಟ್ ಫ್ಲಿಕ್ಸ್, ಅಮೆಝಾನ್ ಪ್ರೈಮ್ ಮತ್ತಿತರ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳು ಭಾರತದ್ದೇ ಆಗಿರುವ ಅಧಿಕಾರಿಗಳನ್ನು ಇದಕ್ಕಾಗಿ ನಿಯೋಜನೆ ಮಾಡಬೇಕು. ದೂರು, ಅಹವಾಲುಗಳಿಗೆ ಅಧಿಕಾರಿಗಳು 15 ದಿನಗಳಲ್ಲಿ ಉತ್ತರ ನೀಡಬೇಕಾಗುತ್ತದೆ. ಸೋಶಿಯಲ್ ಮೀಡಿಯಾಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಜಾಲತಾಣದ ಈ ಪ್ರತಿನಿಧಿಗಳು ಸರಕಾರದ ಆಯಾ ಖಾತೆಗಳ ಪ್ರತಿನಿಧಿಗಳನ್ನು ಒಳಗೊಂಡು ಸಮಿತಿ ರಚಿಸಿ, ಆಕ್ಷೇಪಾರ್ಹ ವಿಷಯಗಳ ಮೇಲೆ ನಿಗಾ ಇಡಬೇಕಾಗಿದೆ.

Social media giants like Facebook, Twitter, WhatsApp and Instagram may face ban in India if they fail to comply with the new intermediary guidelines for social media platforms. The three-month deadline given by the Ministry of Electronics & Information Technology (MEITy) to accept these guidelines ends today i.e. May 25 but none of the giants have so far accepted the new regulations. The rules will be effective from tomorrow despite these companies seeking a total six-month delay in their implementation.