2019-20ರಲ್ಲಿ 2 ಸಾವಿರದ ನೋಟ್ ಮುದ್ರಿಸಿಯೇ ಇಲ್ಲ ; ಆರ್ ಬಿಐ, ಮಾಯ ಆಗಲಿದೆಯೇ ಪಿಂಕ್ ನೋಟ್ !! 

28-08-20 05:48 pm       Headline Karnataka News Network   ದೇಶ - ವಿದೇಶ

ಎರಡು ಸಾವಿರ ಮೌಲ್ಯದ ಪಿಂಕ್ ನೋಟುಗಳನ್ನು ಕಳೆದ ಎರಡು ವರ್ಷಗಳಿಂದ ಆರ್ ಬಿಐ ಮುದ್ರಣ ಕೇಂದ್ರ ಮುದ್ರಿಸಿಯೇ ಇಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. 

ನವದೆಹಲಿ, ಆಗಸ್ಟ್ 28: ಎರಡು ಸಾವಿರ ರೂಪಾಯಿ ಮೌಲ್ಯದ ಪಿಂಕ್ ನೋಟನ್ನು ರದ್ದು ಪಡಿಸುತ್ತಾರೆ ಎಂಬ ವದಂತಿ ಹರಡಿತ್ತು. ಆದರೆ ನೋಟು ರದ್ದು ವಿಚಾರದಲ್ಲಿ ಆರ್ ಬಿಐ ಆಗಲೀ, ಕೇಂದ್ರ ಸರಕಾರವಾಗಲೀ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೇ ವೇಳೆ ಎರಡು ಸಾವಿರ ಮೌಲ್ಯದ ಪಿಂಕ್ ನೋಟುಗಳನ್ನು ಕಳೆದ ಎರಡು ವರ್ಷಗಳಿಂದ ಆರ್ ಬಿಐ ಮುದ್ರಣ ಕೇಂದ್ರ ಮುದ್ರಿಸಿಯೇ ಇಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. 

ಹೌದು... 2019 ಮತ್ತು 2020ರ ವರ್ಷದ ಮಾರ್ಚ್ ತಿಂಗಳ ವರೆಗೆ ಒಂದೇ ಒಂದು ಎರಡು ಸಾವಿರದ ನೋಟನ್ನು ಹೊಸತಾಗಿ ಮುದ್ರಿಸಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧೀನದಲ್ಲಿ ನೋಟು ಮುದ್ರಣ ಮಾಡುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಲಿಮಿಟೆಡ್‌ ಆರ್ ಟಿಐ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದೆ. 2018ರಲ್ಲಿ ಎರಡು ಸಾವಿರ ಮೌಲ್ಯದ 467 ಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು. 2018ರ ಎಪ್ರಿಲ್ ತಿಂಗಳಲ್ಲಿ 184 ಲಕ್ಷ ಎರಡು ಸಾವಿರದ ನೋಟು ಮುದ್ರಿಸಿದ್ದರೆ, ಮೇ ತಿಂಗಳಿನಲ್ಲಿ 282 ಲಕ್ಷ ಪಿಂಕ್ ನೋಟುಗಳ ಮುದ್ರಿಸಲಾಗಿತ್ತು. ಪಿಂಕ್ ನೋಟುಗಳ ಮುದ್ರಣ ಆಗಿರುವುದು ಅದೇ ಕೊನೆ.. ಆನಂತರ ಯಾವುದೇ ಮುದ್ರಣ ಕೇಂದ್ರಗಳಲ್ಲಿಯೂ ಎರಡು ಸಾವಿರ ಮೌಲ್ಯದ ನೋಟುಗಳನ್ನು ಮುದ್ರಿಸಿಲ್ಲ ಎಂದು ಆರ್ ಬಿಐ, ಮಾಧ್ಯಮ ಸಂಸ್ಥೆಯೊಂದು ಕೇಳಿದ ಆರ್ ಟಿಐ ಪ್ರಶ್ನೆಗೆ ಮಾಹಿತಿ ನೀಡಿದೆ. 

ಇದೇ ವೇಳೆ, ಆರ್ ಬಿಐ ಎರಡು ಸಾವಿರ ಮೌಲ್ಯದ ನೋಟುಗಳ ಚಲಾವಣೆ ಕಡಿಮೆಯಾಗಿರುವುದನ್ನೂ ಒಪ್ಪಿಕೊಂಡಿದೆ. ಕಳೆದ ಬಾರಿ ಆರ್ ಬಿಐ ನೀಡಿದ ವಾರ್ಷಿಕ ಲೆಕ್ಕಪತ್ರದಲ್ಲಿ ಈ ಮಾಹಿತಿ ನೀಡಿದ್ದು ಮಾರ್ಚ್ 2020ರಲ್ಲಿ 27,398 ಲಕ್ಷ 2 ಸಾವಿರದ ನೋಟುಗಳು ಚಲಾವಣೆಯಲ್ಲಿದ್ದರೆ, 2018ರಲ್ಲಿ 33,632 ಲಕ್ಷ ನೋಟು ಚಲಾವಣೆಯಲ್ಲಿದ್ದವು  ಎಂಬುದನ್ನು ಹೇಳಿದೆ‌. ಈ ಮೂಲಕ ಎರಡು ಸಾವಿರ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ನಿಧಾನವಾಗಿ ಕಡಿಮೆಗೊಳಿಸಲಾಗುತ್ತಿದೆ ಎನ್ನುವ ಸೂಚನೆ ನೀಡಿದೆ. 

2016ರ ನವೆಂಬರ್ ತಿಂಗಳಲ್ಲಿ 500 ಮತ್ತು ಒಂದು ಸಾವಿರ ಮೌಲ್ಯದ ನೋಟುಗಳನ್ನು ದಿಢೀರ್ ರದ್ದುಪಡಿಸಿ, ಹೊಸತಾಗಿ ಎರಡು ಸಾವಿರ ಮೌಲ್ಯದ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. 2016, 2017 ಮತ್ತು 2018ರಲ್ಲಿ ಎರಡು ಸಾವಿರದ ನೋಟುಗಳನ್ನು ಮುದ್ರಿಸಲಾಗಿತ್ತು. ಆನಂತರ ಪಿಂಕ್ ನೋಟು ಮುದ್ರಣ ನಿಲ್ಲಿಸಿದ್ದಲ್ಲದೆ, ಚಲಾವಣೆಯನ್ನೂ ನಿಧಾನವಾಗಿ ಕಡಿಮೆಗೊಳಿಸುತ್ತಿರುವ ವಿಚಾರ ಈಗ ಬಯಲಾಗಿದೆ.