ಗಡಿಭಾಗದ ಕನ್ನಡದ ಹೆಸರಿಗೆ ಆಪತ್ತು ; ಕಾಸರಗೋಡಿನಲ್ಲಿ ಹೆಸರಿಗೂ ಬಂತು ಮಲಯಾಳೀಕರಣದ ಗಂಧ !

26-06-21 02:00 pm       Headline Karnataka News Network   ದೇಶ - ವಿದೇಶ

ಜಿಲ್ಲೆಯ ಕೆಲವು ಪ್ರದೇಶಗಳ ಕನ್ನಡ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಲು ಕೇರಳ ಸರಕಾರ ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಅಚ್ಚ ಕನ್ನಡದ ಹೆಸರುಗಳನ್ನು ಬದಲಾಯಿಸುವ  ಮಲಯಾಳೀಕರಣದ ನಡೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ವಿರೋಧ ವ್ಯಕ್ತಪಡಿಸಿದೆ. 

ಕಾಸರಗೋಡು, ಜೂನ್ 26: ಜಿಲ್ಲೆಯ ಕೆಲವು ಪ್ರದೇಶಗಳ ಕನ್ನಡ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಲು ಕೇರಳ ಸರಕಾರ ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಮಂಜೇಶ್ವರ ತಾಲೂಕಿನ ಹೆಸರು ಸೇರಿದಂತೆ ಉತ್ತರ ಕೇರಳ ಭಾಗದ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ತಕ್ಕಂತೆ ಬದಲಿಸಿ, ಮಲಯಾಳವನ್ನು ಹೇರುವ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗುತ್ತಿದ್ದು ಈ ರೀತಿ ಅಚ್ಚ ಕನ್ನಡದ ಹೆಸರುಗಳನ್ನು ಬದಲಾಯಿಸುವ  ಮಲಯಾಳೀಕರಣದ ನಡೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ವಿರೋಧ ವ್ಯಕ್ತಪಡಿಸಿದೆ. 

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ಕನ್ನಡ ಭಾಷೆಯನ್ನೇ ಹೆಚ್ಚು ಬಳಸುವ ಕಾಸರಗೋಡು ಜಿಲ್ಲೆಯ ಗ್ರಾಮ, ಪಟ್ಟಣಗಳ ಹೆಸರನ್ನು ಕೇರಳ ಸರ್ಕಾರ ಮಲಯಾಳಂ ಭಾಷೆಗೆ  ಬದಲಾಯಿಸುವ ಪ್ರಕ್ರಿಯೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಈ  ಹೆಸರುಗಳನ್ನು ಬದಲಿಸುವುದರಿಂದ ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆಯಾಗುತ್ತದೆ  ಎಂದು ತಿಳಿಸಿದ್ದಾರೆ.

ಅಲ್ಲದೆ, ಈ ರೀತಿಯ ಬದಲಾವಣೆಗಳನ್ನು ಏಕಾಏಕಿ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಆಯಾ ಭಾಗದ ಕನ್ನಡಿಗರು ಅಥವಾ ಅಲ್ಲಿನ ನಾಗರಿಕರು, ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ಕೇಳಿಲ್ಲ. ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಅಲ್ಲಿನ ಕನ್ನಡ ಪರ ಸಂಘ- ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಇದು ಕೇರಳ ಸರಕಾರದ ಮಲಯಾಳೀಕರಣದ ಒಂದು ಭಾಗ ಎಂದು ಪ್ರಕಾಶ ಮತ್ತೀಹಳ್ಳಿ ಹೇಳಿದ್ದಾರೆ.

ಕೇರಳ ಸರಕಾರದ ಈ ನೀತಿಯ ವಿರುದ್ದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅವರು ಕೇರಳ ಸರ್ಕಾರ ಮತ್ತು ಅಲ್ಲಿನ ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿದ್ದು ಕನ್ನಡದ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಆಗ್ರಹಿಸಿದ್ದಾರೆ. ಇದಲ್ಲದೆ ನಾಮಫಲಕ ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವರಿಕೆ ಮಾಡಬೇಕೆಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಕನ್ನಡದ ಹೆಸರುಗಳ ಬದಲಾವಣೆಗೆ ತೆರೆಮರೆಯ ಯತ್ನ 

ಅಚ್ಚ ಕನ್ನಡದ ಪ್ರದೇಶ ಆಗಿರುವ ಮಧೂರು ಹೆಸರನ್ನು ಮಧುರಮ್ ಎಂದು ಬದಲಿಸಲು ಹೊರಟಿದ್ದಾರೆ. ಮಲ್ಲ ಅನ್ನು ಮಲ್ಲಮ್, ಕಾರಡ್ಕ – ಕಡಗಮ್, ಬೇಡಡ್ಕ – ಬೆಡಗಮ್, ಪಿಳಿಕುಂಜೆ – ಪಿಳಿಕುನ್ನು, ಆನೆಬಾಗಿಲು – ಆನೆವಾಗಿಲ್ ಎಂದು ಬದಲಿಸಲು ಸರಕಾರೀ ವ್ಯವಸ್ಥೆಯಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ. ಇದಲ್ಲದೆ, ತಾಲೂಕು ಕೇಂದ್ರ ಮಂಜೇಶ್ವರ  ಮಂಜೇಶ್ವರಮ್ ಆಗಲಿದೆ.  ಹೊಸದುರ್ಗ ಹೆಸರಲ್ಲಿ ಕನ್ನಡ ಇರುವ ಕಾರಣಕ್ಕೆ ಪುದಿಯಕೋಟ ಎಂದು ಅಚ್ಚ ಮಲಯಾಳಕ್ಕೆ ಬದಲಿಸಲು ತಂತ್ರ ನಡೆದಿದೆ. ಕುಂಬಳೆ -  ಕುಂಬ್ಳಾ, ಸಸಿಹಿತ್ಲು - ಶೈವಲಪ್, ನೆಲ್ಲಿಕುಂಜ – ನೆಲ್ಲಿಕುನ್ನಿ ಎಂದು ಕರ್ನಾಟಕ ಗಡಿಭಾಗದಲ್ಲಿರುವ ಊರುಗಳ ಕನ್ನಡದ ಹೆಸರುಗಳನ್ನು ಮಲಯಾಳಂ ಭಾಷೆಗೆ ಪರಿವರ್ತಿಸಲು ಸದ್ದಿಲ್ಲದೆ ಯತ್ನ ನಡೆದಿದೆ.

Kasaragod Place of names in Kannada now getting converted to Malayalam. People in the border create  issue over the conversion of language.